ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆ ಆಚರಿಸುತ್ತಾ, ಮಹಿಳೆಯರ ವಿರುದ್ಧ ಕ್ರೌರ್ಯ ಎಸಗುತ್ತಾ, ‘ವಸುಧೈವ ಕುಟುಂಬಂ’ ‘ಸರ್ವೇಜನ ಸುಖಿನೋ ಭವಂತು’, ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ’ ಎಂದು ಬರಿದೇ ಪುಂಖಾನುಪುಂಖವಾಗಿ ಮಾತನಾಡುವ ನೀವು, ಜಾತಿ ಕ್ರೌರ್ಯಕ್ಕೆ ಸಿಲುಕಿ ದಲಿತರ ಹೆಣಗಳು ಉರುಳಿದಾಗ ಅಂತಹ ಅಮಾನವೀಯ ರಾಕ್ಷಸೀ ಕೃತ್ಯ ನಡೆಸಿದವರ ವಿರುದ್ಧ ಒಂದಕ್ಷರವನ್ನೂ ಮಾತಾಡುವುದಿಲ್ಲ.
ಕೆಳಜಾತಿಗಳಿಗೆ ಕೊಡಲಾಗುತ್ತಿದ್ದ ಮೀಸಲಾತಿ ಸೌಲಭ್ಯದ ವಿರುದ್ಧ ಬೊಬ್ಬಿಡುತ್ತಿದ್ದ ನೀವು, ಆರ್ಥಿಕ ಹಿಂದುಳಿದಿರುವಿಕೆಯ ಕಾರಣವನ್ನು ಮುಂದೊಡ್ಡಿ ಸಂವಿಧಾನದ ಆಶಯದ ವಿರುದ್ಧ ಕೇವಲ 4% ಜನ 10% ಮೀಸಲಾತಿ ಕಬಳಿಸಿರುವ ಸಾಮಾಜಿಕ ಅನ್ಯಾಯದ ವಿರುದ್ಧ ತುಟಿ ಪಿಟಿಕ್ ಎನ್ನುವುದಿಲ್ಲ.
ಶೂದ್ರ ಗೊಲ್ಲನಾದ ಕೃಷ್ಣನಿಗೆ ಗುಡಿ ಕಟ್ಟಿ ಗರ್ಭಗುಡಿಯಲ್ಲಿ ನೀವು ನಿಂತು ಶೂದ್ರರನ್ನು ಆಚೆಗಿರಿಸಿರುವ ಬಗ್ಗೆಯಾಗಲೀ ಪಂಕ್ತಿಭೇದದ ವಿರುದ್ಧವಾಗಲೀ ಮಾತಾಡಲು ನಿಮಗೆ ಬಾಯಿಲ್ಲ.
ಮಾಂಸಾಹಾರಿ ಶೂದ್ರರ ಬೆವರ ದುಡಿಮೆಯ ಕಾಣಿಕೆಗಳಿಂದಲೇ ಮಠಮಾನ್ಯ ಗುಡಿಗುಂಡಾರಗಳ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದೀರಿ. ಮಾಂಸಾಹಾರ ಸಂಸ್ಕೃತಿಯ ಜನರನ್ನು ಹೀನಾಯಿಸಿ ಮಾತಾಡುವ ನೀವು ಮಾಂಸಾಹಾರಿ ಶಿವನನ್ನೇಕೆ ಪೂಜಿಸುವಿರಿ? ಮಾಂಸಾಹಾರಿ ಗೊಲ್ಲರ ಕೃಷ್ಣನನ್ನೇಕೆ ಆರಾಧಿಸುವಿರಿ? ಮಾಂಸಾಹಾರಿ ಕುರುಬ ಜನಾಂಗದಲ್ಲಿ ಹುಟ್ಟಿದ ಸಂತಕವಿ ಕನಕದಾಸರ ಹೆಸರಿನಲ್ಲಿ ಕಿಂಡಿ ಕೊರೆದು ಕಿಂಡಿಕಾಸು ತಟ್ಟೆಕಾಸು ಯಾಕಾಗಿ ಪಡೆಯುವಿರಿ?
ಬ್ರಾಹ್ಮಣ್ಯದ ಅಮಲನ್ನು ಶೂದ್ರರಿಗೂ ಏರಿಸಿ ಧರ್ಮದ ವ್ಯಸನಿಗಳನ್ನು ಸೃಷ್ಟಿಸಿ ವೈದಿಕಾರ್ಯರ ಕೋಟೆ ಕಾಯಲು ತ್ರಿಶೂಲ ದೀಕ್ಷೆ ಕೊಡುತ್ತಿರುವ ಹೇಯಕೃತ್ಯವು ಅಂಬೇಡ್ಕರ್ ಅವರ ಕಲ್ಪನೆಯ ಜಾತ್ಯತೀತ ನೆಲದಲ್ಲಿ ನಿಮ್ಮಿಂದಾಗಿ ತಾಂಡವವಾಡುತ್ತಿದೆ. ಅತ್ತ ಮುಸ್ಲಿಮರ ವಿರುದ್ಧ ಇತ್ತ ಕ್ರಿಶ್ಚಿಯನ್ನರ ವಿರುದ್ಧ ಶೂದ್ರರನ್ನು ನಿಲ್ಲಿಸಿ ಕೋಮು ಧ್ವೇಷದ ಬಿಸಿ ರಕ್ತವನ್ನು ಕುಡಿಯುತ್ತಿದ್ದೀರಿ.
ಸಹಜವಾದ ಮತಾಂತರವನ್ನು ನೋಡಿ ಕೆರಳುವ ನಿಮಗೆ ಇಲ್ಲಿಯ ಅಸ್ಪೃಶ್ಯತೆ, ಸ್ತ್ರೀ ಶೋಷಣೆ, ಅಲೆಮಾರಿಗಳ ಬದುಕಿನ ಗೋಳಿನ ಪಾಡು ಕಾಣಿಸುವುದಿಲ್ಲ ಯಾಕೆ?
ಮಾಂಸಾಹಾರ ಸಂಸ್ಕೃತಿಯ ಬುಡಕಟ್ಟು ಮತ್ತು ಕೆಳಜಾತಿಗಳ ದ್ರಾವಿಡ ದೇವರುಗಳಾದ ಶಿವ, ಚಾಮುಂಡಿ, ಕೃಷ್ಣ ಮುಂತಾದವರನ್ನು ಆರಾಧಿಸುವುದನ್ನು ನಿಮಗೆ ವರ್ಜಿಸಲು ಸಾಧ್ಯವಿಲ್ಲವೇ? ಮಾಂಸಾಹಾರಿ ದೇವರುಗಳನ್ನು ಮಾತ್ರ ನಿಮಗೆ ಬೇಕಾದ ಗುಡಿಗುಂಡಾರ ಮಠಮಾನ್ಯ ಕಟ್ಟಿಕೊಳ್ಳಲು ಸ್ವೀಕರಿಸಿರುವ ನೀವು ಹಾಗೂ ಮಾಂಸಾಹಾರಿಗಳು ಕೊಡುವ ಕಾಣಿಕೆಗಳನ್ನು ಸ್ವೀಕರಿಸುವ ನೀವು, ಮಾಂಸಾಹಾರಿಗಳನ್ನು ನಿಮ್ಮೊಳಕ್ಕೆ ಸ್ವೀಕರಿಸದಿರುವುದು ಯಾವ ನ್ಯಾಯ? ಮಾಂಸಾಹಾರಿ ದೇವರು ಮತ್ತು ಮಾಂಸಾಹಾರಿಗಳ ದುಡಿಮೆಯನ್ನು ಹಾಗೆ ವರ್ಜಿಸಲು ನಿಮಗೆ ಸಾಧ್ಯವಿಲ್ಲವೆಂದ ಮೇಲೆ ಮಾಂಸಾಹಾರದ ಸಂಗತಿಯನ್ನು ಕುರಿತು ಇದೇ ದೇವರುಗಳ ಅಸಲಿ ವಾರಸುದಾರರು ಮಾತಾಡುವುದರಲ್ಲಾಗಲೀ ಅಥವಾ ನಿಮಗೆ ಒಗ್ಗುವುದಾದರೆ ಮಾಂಸಾಹಾರ ಸೇವಿಸಿರೆಂದು ಕೇಳುವುದರಲ್ಲಾಗಲೀ ತಪ್ಪೇನಿದೆ?
ಹೀಗೆಂದು ಪ್ರಶ್ನಿಸಿದಾಗ ಮಠಾಧಿಪತಿಗಳಿಗೆ ತಮ್ಮದೇ ಆದ ಆಚಾರ ವಿಚಾರ ನೀತಿನಿಯಮಗಳಿರುತ್ತವೆ ಎನ್ನುತ್ತೀರಿ. ಮಠಾಧಿಪತಿಗಳ ವೈಯಕ್ತಿಕ ಆಯ್ಕೆ ಮತ್ತು ಆದ್ಯತೆಗಳು (ಸಮಾಜ ಹೇರಿರುವಂಥವಾದರೂ) ಮನುಷ್ಯ ಮನುಷ್ಯರ ನಡುವೆ ಭೇದ ಸೃಷ್ಟಿಸುವಂತಿವೆ. ಈಗಾಗಲೇ ಇರುವ ಭೇದವನ್ನು ಮತ್ತಷ್ಟು ಹೆಚ್ಚಿಸುವಂತಿವೆ. ಪುರುಷರಿಗಷ್ಟೇ ಮಠದ ಪಟ್ಟಾಧಿಕಾರ ಎಂದಾಗ ಮಹಿಳೆಯರು ಅಂತಹ ಅಧಿಕಾರ ಹೊಂದಲು ಯೋಗ್ಯರಲ್ಲ ಎಂದು ತೀರ್ಮಾನಿಸಿದಂತಾಗುತ್ತದೆ. ಆಯಾ ಜಾತಿ ಮಠಗಳು ತಮ್ಮದೇ ಜಾತಿಯ ವಟುಗಳಿಗೆ ಪಟ್ಟಾಧಿಕಾರ ವಹಿಸುತ್ತಿರುವುದರಿಂದಾಗಿ ಮಠಗಳು ಜಾತಿ ಪಾಲನೆ ಮಾಡುತ್ತಿವೆಯೇ ಹೊರತು ಜಾತಿ ಪದ್ದತಿಯನ್ನು ಪ್ರಶ್ನಿಸುತ್ತಿಲ್ಲ ಎಂದು ಅರ್ಥವಾಗುತ್ತದೆ.
ಎಲ್ಲಾ ಜಾತಿಗಳು ಅಥವಾ ಸಾರ್ವಜನಿಕರು ನೀಡುವ ದತ್ತಿ ದಾನ ದೇಣಿಗೆ ಕಾಣಿಕೆಗಳನ್ನು ಪಡೆದು ಬೆಳೆಯುವ ಮಠಗಳು ತಮ್ಮದೇ ಜಾತಿಯ ರಾಜಕಾರಣಿಗಳ ಮತ್ತು ಅಧಿಕಾರಿಗಳ ಹಾಗೂ ಬಂಡವಾಳಸ್ತರ ಹಿತಕಾಯುವ ಕೆಲಸ ಮಾಡುತ್ತವೆಂದರೆ ಏನರ್ಥ? ಮಠಾಧಿಪತಿಗಳೆಂದರೆ ಆಯಾ ಜಾತಿಯ ಸಾಮಾಜಿಕ ಅಧಿಕಾರ ಮತ್ತು ಸಂಪತ್ತನ್ನು ಕಾಯುವ ‘ಪವಿತ್ರ ಕಾವಲು ನಾಯಿಗಳು’ ಎಂದರ್ಥ ತಾನೆ?
ಮಾಂಸಾಹಾರಿ ಸಂಸ್ಕೃತಿಯ ಕೆಳ ಜಾತಿಗಳಿಗೆ ಸಹಪಂಕ್ತಿ ಭೋಜನದಿಂದ ಹಾಗೂ ಗುಡಿಯಲ್ಲಿ ಪ್ರವೇಶ ನೀಡದೆ ಆಚೆಗಿರಿಸುವ ನೀತಿನಿಯಮಗಳ ಪಾಲನೆಯಿಂದಾಗಿ ಮನುಷ್ಯರ ನಡುವೆ ಮೇಲುಕೀಳೆಂಬ ಭೇದವನ್ನು ಸೃಷ್ಟಿಸಿದಂತೆಯೇ ತಾನೆ? ಮಾಂಸಾಹಾರಿ ಹಿನ್ನೆಲೆಯ ಶಿವ ರಾಮ ಕೃಷ್ಣ ಚಾಮುಂಡಿ ಮುಂತಾದವರ ಹೆಸರಿನಲ್ಲಿ ಗುಡಿ ಕಟ್ಟಿ ಗರ್ಭ ಗುಡಿಯೊಳಗೆ ಪೂಜಾರಿಕೆ ವಹಿಸಿಕೊಂಡವರು ಅದೇ ಮಾಂಸಾಹಾರಿ ಸಂಸ್ಕೃತಿ ಹಿನ್ನೆಲೆಯ ಸಾಮಾಜಿಕ ವರ್ಗದ ಜನರನ್ನು ಗುಡಿಯಿಂದಾಚೆಗೆ ನಿಲ್ಲಿಸುತ್ತಿರುವ ಪುರೋಹಿತಶಾಹಿಗಳ ದ್ವಂದ್ವ ಪ್ರವೃತ್ತಿಯನ್ನು ಏನೆಂದು ಕರೆಯಬೇಕು?
ಅವರದ್ದೇ ನೂಲು/ಲಿಂಗ ವರ್ಗದ ಕೆಲವರು ಮಾಂಸ ಮದ್ಯಗಳ ಜ್ವರವೇರಿ ನೂಲು/ಲಿಂಗ ಕಳಚಿಟ್ಟು ಬಾರುಗಳಲ್ಲಿ ಕುಳಿತು ಜಬ್ಬರಿದು ನಲ್ಲಿಮೂಳೆ ಚಪ್ಪರಿಸಿ ಕಂಠಮಟ್ಟ ಕಳ್ಳು ಕುಡಿಯುತ್ತಾರೆ. ಇಂತಹ ವಿದ್ಯಮಾನ-ವರ್ತನೆಗಳಿಗೆ ಇವರಲ್ಲಿ ಯಾವ ಉತ್ತರವಿದೆ?
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು




