ಎಲ್ಲಿಯೂ ದಲಿತರನ್ನು ಅಗೌರವಿಸುವ ಮಾತು ಆಡಿಲ್ಲ: ಸಿದ್ದರಾಮಯ್ಯ

4 years ago

ಬೆಂಗಳೂರು: ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ನಾರಾಯಣ ಸ್ವಾಮಿ ಮೊದಲಾದವರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಬಿಜೆಪಿ ಜೊತೆ ಸ್ವಾರ್ಥಕ್ಕಾಗಿ ಸೇರಿದ್ದಾರೆ ಎಂದು ಸಿಂದಗಿಯ ಮಾದಿಗ ದಂಡೋರಾ ಸಭೆಯಲ್ಲಿ ಹೇಳಿದ್ದೆ ಹೊರತು ಎಲ್ಲಿಯೂ ದಲಿತರನ್ನು ಅಗೌರವಿಸುವ ಮಾತು ಆಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.

ಈ ವಿಷಯದ ಕುರಿತು ಬಿಜೆಪಿ ಮತ್ತು ಕೆಲವು ನಾಯಕರು ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಾಗ, ದಲಿತರನ್ನು ನಾಯಿಗಳು ಎಂದು ತುಚ್ಚೀಕರಿಸಿದಾಗ ಬಾಯಿ ಮುಚ್ಚಿಕೊಂಡಿದ್ದ ಬಿಜೆಪಿಯ ದಲಿತ ನಾಯಕರು, ಈಗ ನನ್ನ ವಿರುದ್ಧ ಕೂಗು ಹಾಕುತ್ತಿರುವುದು ರಾಜಕೀಯ ಸ್ವಾರ್ಥಕ್ಕಾಗಿಯಲ್ಲದೆ ಮತ್ತೇನು? ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನನ್ನು ದಲಿತ ವಿರೋಧಿ ಎಂದು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ನನ್ನದೊಂದು ಸಣ್ಣ ಸವಾಲು. ರಾಜ್ಯ ಬಜೆಟ್ ನ ಶೇಕಡಾ 24.1ರಷ್ಟು ಭಾಗವನ್ನು ಮೀಸಲಿಡುವ SCSP/TSP  ಕಾಯ್ದೆಯನ್ನು ನಾನು ಜಾರಿಗೆ ತಂದಿದ್ದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿ ರಾಷ್ಟ್ರಮಟ್ಟದಲ್ಲಿ ಅದನ್ನು ಜಾರಿಗೆ ತರುವಂತೆ ಮಾಡಿ ನೋಡೋಣ ಎಂದು ಅವರು ಸವಾಲೆಸೆದಿದ್ದಾರೆ.

2008-09 ರಿಂದ 2012-13ನೇ ಸಾಲಿನವರೆಗೆ ಬಿಜೆಪಿ ಸರ್ಕಾರ SCSP/TSP  ಯೋಜನೆಯಡಿ ಖರ್ಚು ಮಾಡಿದ್ದು ಕೇವಲ ರೂ.22,261 ಕೋಟಿ. ನಮ್ಮ ಸರ್ಕಾರದ ಅವಧಿಯಲ್ಲಿ ರೂ. 88,395 ಕೋಟಿ. ಯಾರು ದಲಿತ ವಿರೋಧಿ? ನಾನಾ? ಬಿಜೆಪಿ ನಾಯಕರಾ? ಎಂದು ಅವರು ಪ್ರಶ್ನಿಸಿದ್ದಾರೆ.

ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಸೌಲಭ್ಯವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದಾಗ ಬಿಜೆಪಿ ದಲಿತ ನಾಯಕರು ಕಣ್ಣುಮುಚ್ಚಿ ಕೂತಿದ್ದರು. ಸುಗ್ರಿವಾಜ್ಞೆ ಮೂಲಕ ಆ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ ಎನ್ನುವುದನ್ನು ಮರೆಯಬೇಡಿ ಎಂದು ಅವರು ನೆನಪಿಸಿದ್ದಾರೆ.

ಪರಿಶಿಷ್ಟ ಜಾತಿ/ಪಂಗಡದ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಶೇಕಡಾ 18ರಷ್ಟು ಮೀಸಲಾತಿ ನೀಡಿ ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ನಮ್ಮ ಸರ್ಕಾರ ಎಂದಿದ್ದಾರೆ.

ರಾಜ್ಯ ಬಿಜೆಪಿಯ ದಲಿತ ನಾಯಕರು ಮೋದಿಯವರಿಗೆ ಹೇಳಿ ರಾಷ್ಟ್ರಮಟ್ಟದಲ್ಲಿ ದಲಿತರಿಗೆ ಈ ಅನುಕೂಲ ಮಾಡಿಕೊಡಿ. ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಆಶ್ರಮ ಶಾಲೆ, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಹಾರಕ್ಕಾಗಿ ಮಾಸಿಕವಾಗಿ ನೀಡುತ್ತಿದ್ದ ಹಣ ರೂ.600, ರೂ.750 ಮತ್ತು ರೂ.850 ಅದನ್ನು ಕ್ರಮವಾಗಿ ರೂ.1300, ರೂ.1500 ಮತ್ತು ರೂ.1600ಕ್ಕೆ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂದಿದ್ದಾರೆ.

ನಮ್ಮ ಸರ್ಕಾರ ಹೋಬಳಿಗೊಂದು ಪ.ಜಾ/ಪ.ಪಂ ವಸತಿ ಶಾಲೆಯಂತೆ 270 ಹೊಸ ವಸತಿ ಶಾಲೆ ಹಾಗೂ 200 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿತ್ತು. ಇದರಿಂದ 74,300 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಾವಕಾಶ ಸಿಕ್ಕಿದೆ ಎಂದಿದ್ದಾರೆ.

ಬಿಜೆಪಿ ಸರ್ಕಾರದ ಸಾಧನೆ ಏನು?

ಪ.ಜಾ/ಪ.ಪಂ. ಉದ್ಯಮಿಗಳಿಗೆ  KSFC ಮೂಲಕ ಶೇ.4 ರ ಬಡ್ಡಿಯಲ್ಲಿ ರೂ.10 ಕೋಟಿ ವರೆಗೆ ಸಾಲ. ಈ ಸೌಲಭ್ಯವನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೂ ವಿಸ್ತರಣೆ ಮಾಡಿದ್ದೆವು. ಈ ಮೂಲಕ 1,597 ಉದ್ಯಮಿಗಳಿಗೆ 908 ಕೋಟಿ ರೂ. ಸಾಲ ನೀಡಿದ್ದೆವು –ಇದು ನಮ್ಮ ಸಾಧನೆ ಎಂದಿದ್ದಾರೆ.

ಪ.ಜಾ/ಪ.ಪಂ ಸಮುದಾಯದ ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ/ಅತಿ ಸೂಕ್ಷ್ಮ 72 ಸಮುದಾಯಗಳನ್ನು ಗುರುತಿಸಿ ರೂ.222 ಕೋಟಿ ವೆಚ್ಚದಲ್ಲಿ ಅವರ ಶೈಕ್ಷಣಿಕ  ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು ನಮ್ಮ ಸರ್ಕಾರ ಎಂದಿದ್ದಾರೆ.

ನಮ್ಮ ಸರ್ಕಾರ  840 ಕೋಟಿ ರೂ. ವೆಚ್ಚದಲ್ಲಿ  ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಂ ಮತ್ತು ಮಹರ್ಷಿ ವಾಲ್ಮೀಕಿಯವರ ಹೆಸರಲ್ಲಿ 8,199 ಭವನಗಳನ್ನು ನಿರ್ಮಿಸಿತ್ತು. ನನ್ನನ್ನು ದಲಿತ ವಿರೋಧಿ ಎಂದು ಹೇಳುವವರು ಬಿಜೆಪಿ ಕಾಲದಲ್ಲಿ ಕಟ್ಟಿದ್ದೆಷ್ಟು ಎಂದು ಲೆಕ್ಕ ಹೇಳಲಿ ಎಂದು ಅವರು ಸವಾಲೆಸೆದಿದ್ದಾರೆ.

ನಮ್ಮ ಸರ್ಕಾರ 1,494 ಕೋಟಿ ರೂ. ವೆಚ್ಚದಲ್ಲಿ  ಪ.ಜಾ/ಪ.ಪಂ ವಿದ್ಯಾರ್ಥಿನಿಲಯಗಳ ಸ್ವಂತ ಕಟ್ಟಡ, ರೂ.1,537 ಕೋಟಿ ವೆಚ್ಚದಲ್ಲಿ 129 ವಸತಿ ಶಾಲಾ ಸಂಕೀರ್ಣ ನಿರ್ಮಾಣ,  16 ವಿಶ್ವವಿದ್ಯಾಲಯಗಳಲ್ಲಿ 116 ಕೋಟಿ ರೂ. ವೆಚ್ಚದಲ್ಲಿ ಸ್ನಾತಕೋತ್ತರ ವಸತಿನಿಲಯ ನಿರ್ಮಿಸಿದೆ.

ಎರಡೂವರೆ ಲಕ್ಷ ಪ.ಜಾ/ಪ.ಪಂ ಫಲಾನುಭವಿಗಳು ವಿವಿಧ ಅಭಿವೃದ್ಧಿ ನಿಗಮದಿಂದ ಪಡೆದಿದ್ದ ರೂ.581 ಕೋಟಿ ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ. ಬಿಜೆಪಿ ಸರ್ಕಾರ ಈ ಸಮುದಾಯದ ಫಲಾನುಭವಿಗಳ ಎಷ್ಟು ಸಾಲ ಮನ್ನಾ ಮಾಡಿದೆ? ಎಂದು ಪ್ರಶ್ನಿಸಿದ್ದಾರೆ

ನಾನು ಮುಸ್ಲಿಂ ವಿರೋಧಿ ಎಂದು ಬೊಬ್ಬಿಟ್ಟ ಪಕ್ಷದ ಅಭ್ಯರ್ಥಿಗಳ ಠೇವಣಿ ಜಪ್ತಿ ಮಾಡಿಸಿ ಉಪ ಚುನಾವಣೆಯಲ್ಲಿ ಮತದಾರರು ಉತ್ತರ ಕೊಟ್ಟಿದ್ದಾರೆ. ಈಗ ಬಿಜೆಪಿಯ ಕೆಲವು ತಥಾಕಥಿತ ದಲಿತ ನಾಯಕರು ನಾನು ದಲಿತ ವಿರೋಧಿ ಎಂದು ಕೂಗಾಡುತ್ತಿದ್ದರಂತೆ. ಇದಕ್ಕೂ ಮತದಾರರೇ ಉತ್ತರ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.

Leave a Reply