ಪ್ರಕರಣಗಳನ್ನು ಆಯ್ಕೆ ಮಾಡುವಲ್ಲಿ ಸಿಬಿಐ ತಾರತಮ್ಯ ನೀತಿ ಅನುಸರಿಸುತ್ತಿದೆಯೇ?

2 years ago

ಸಿಬಿಐ ಯಾವುದೇ ಪ್ರಕರಣವನ್ನು ತನಿಖೆಗೆ ಒಪ್ಪಿಸಿದ ತಕ್ಷಣ ತನಿಖಾ ಅಧಿಕಾರಿಯನ್ನು ನೇಮಕ ಮಾಡಿ ತನಿಖೆಯನ್ನು ಆರಂಭಿಸುತ್ತಾರೆ. ಅದರಲ್ಲೂ ವಿರೋಧ ಪಕ್ಷದವರ ವಿಚಾರದಲ್ಲಿ ಮತ್ತಷ್ಟು ಉತ್ಸಾಹವನ್ನು ತೋರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ಆದರೆ ಕೆಲವು ಪ್ರಕರಣಗಳಲ್ಲಿ ಸಿಬಿಐನವರು ಹಲವಾರು ತಿಂಗಳು ಕಳೆದರೂ ತನಿ ಖಾಧಿಕಾರಿಯನ್ನು ನೇಮಕ ಮಾಡದೆ ಪ್ರಕರಣವನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರಲ್ಲಿ ಯಾರ ಕೈವಾಡಗಳು ಇದೆಯೋ ಎನ್ನುವ ಅನುಮಾನವಿದೆ.

ಇದಕ್ಕೆ ಉದಾಹರಣೆ ಎಂದರೆ ಬೆಂಗಳೂರಿನ ಬಸವನಗುಡಿಯಲ್ಲಿ ಕಳೆದ ಕೆಲವು ವರ್ಷದ ಹಿಂದೆ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ಶ್ರೀ ವಸಿಷ್ಠ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ, ಶ್ರೀ ಸಾರ್ವಭೌಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರಗಳಾಗಿ ಸಾವಿರಾರು ಜನ ಠೇವಣಿದಾರರಿಗೆ ಮೋಸವಾಗಿದೆ.

ನೂರಾರು ಜನ ಠೇವಣಿದಾರರು ಈಗಾಗಲೇ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತಷ್ಟು ಮಂದಿ ಪ್ರತಿದಿನವೂ ಸಹ ಆತಂಕದಿಂದ ಬದುಕನ್ನು ಸಾಗಿಸುತ್ತಿದ್ದಾರೆ. ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಆದರೂ ಸಹ ಈ ಪ್ರಕರಣದಲ್ಲಿ ಸಿಬಿಐ ಆಸಕ್ತಿಯನ್ನು ವಹಿಸುತ್ತಿಲ್ಲ.

ರಾಜ್ಯ ಸರ್ಕಾರ ಜನರ ಹಿತದೃಷ್ಟಿಯಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಹಲವಾರು ತಿಂಗಳುಗಳು ಕಳೆದಿದೆ. ಕನ್ನಡ ಭಾಷೆಯಲ್ಲಿದ್ದ ದಾಖಲಾತಿಗಳನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿ ಕಳುಹಿಸಿಕೊಡಲಾಗಿದೆ. ಆದರೈ ತನಿಖಾಧಿಕಾರಿಯನ್ನು ನೇಮಕ ಮಾಡಿರುವುದಿಲ್ಲ. ತನಿಖೆ ಆರಂಭವೇ ಆಗಿರುವುದಿಲ್ಲ. ಇನ್ನು ದುಃಖದಲ್ಲಿರುವ ಸಾವಿರಾರು ಜನರಿಗೆ ನ್ಯಾಯ ಸಿಗುವುದಾದರೂ ಎಲ್ಲಿ?

ಈ ಪ್ರಕರಣದಲ್ಲಿ ಸಿಬಿಐನವರ ನಿರಾಸಕ್ತಿಗೆ ಕಾರಣವಾದರೂ ಏನು ಎನ್ನುವುದು ತಿಳಿಯುತ್ತಿಲ್ಲ. ಬಹುಶಃ ಈ ಪ್ರಕರಣವನ್ನು ತನಿಖೆ ಮಾಡುವುದರಿಂದ ವಿರೋಧ ಪಕ್ಷದ ನಾಯಕರುಗಳ ಮೇಲೆ ಯಾವುದೇ ರೀತಿಯ ಮೊಕದ್ದಮ್ಮೆಗಳನ್ನು ಹೂಡಲು ಸಾಧ್ಯವಿಲ್ಲ. ಇನ್ನೂ ಸರಿಯಾದ ರೀತಿಯಲ್ಲಿ ತನಿಖೆಯಾದರೆ ಸಿಕ್ಕಿಹಾಕಿಕೊಳ್ಳುವವರು ಬೇರೆ ಯಾರಾದರೂ ಇದ್ದಾರೇನೋ ಎನ್ನುವ ಅನುಮಾನದಲ್ಲಿ ತನಿಖೆಯನ್ನು ಮಾಡಲು ಉತ್ಸಾಹವೇ ಇಲ್ಲ.

ರಾಜ್ಯದಲ್ಲಿರುವ ಬಿಜೆಪಿ ನಾಯಕರಿಗೆ ಎಲ್ಲ ಪ್ರಕರಣಗಳಲ್ಲೂ ಸಿಬಿಐ ತನಿಖೆ ಬೇಕೆಂದು ಹಠ ಹಿಡಿಯುತ್ತಾರೆ. ಆದರೆ ಸಾವಿರಾರು ಕೋಟಿ ರೂಪಾಯಿಗಳ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೇ ಅತಿ ದೊಡ್ಡ ಹಗರಣವಾಗಿರುವ ಈ ಪ್ರಕರಣವನ್ನು ಸಿಬಿಐಗೆ ಕೊಡಲು ಅವರು ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಆಸಕ್ತಿಯನ್ನು ತೋರಿಸಲಿಲ್ಲ. ಈಗ ಕಡೆಯ ಪಕ್ಷ ತನಿಖೆಯನ್ನು ಬೇಗ ಮಾಡಿ ಎಂದು ಹೇಳಲು ಅವರಿಗೆ ಬಾಯಿ ಬರುತ್ತಿಲ್ಲ. ಆದರೆ ರಾಜಕೀಯ ಉದ್ದೇಶಗಳಿಗಾಗಿ ಎಲ್ಲ ಪ್ರಕರಣಗಳನ್ನು ಸಿಬಿಐಗೆ ಕೊಡಿ ಎಂದು ಒತ್ತಾಯಿಸುವುದೇ ಇವರ ಕೆಲಸವಾಗಿದೆ.

ನಿಜಕ್ಕೂ ಬಿಜೆಪಿ ನಾಯಕರಿಗೆ ಸಾವಿರಾರು ಜನರ ಬಗ್ಗೆ ಕಾಳಜಿ ಇದ್ದರೆ ಅವರ ಬದುಕಿನ ಬಗ್ಗೆ ಕಳಕಳಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನ ತಂದು ಸಿಬಿಐನವರು ಕೂಡಲೇ ತನಿ‌ ಖಾಧಿಕಾರಿಯನ್ನು ನೇಮಿಸಿ ತನಿಖೆಯನ್ನ ಆರಂಭಿಸಿ. ತಪ್ಪಿತಸ್ಥರು ಯಾರೇ ಆಗಿದ್ದರು ಅವರಿಗೆ ಸರಿಯಾದ ಶಿಕ್ಷೆಯನ್ನು ನೀಡಿ. ಸಾವಿರಾರು ಜನರಿಗೆ ನ್ಯಾಯವನ್ನು ಕೊಡಿಸುವ ಕೆಲಸವನ್ನ ಮಾಡಲಿ.

ಬ್ಯಾಂಕಿನ ಹಗರಣದಲ್ಲಿ ಪ್ರಾಮಾಣಿಕವಾಗಿ ವಿಧಾನ ಪರಿಷತ್ತಿನಲ್ಲಿ ಮತ್ತು ಸಾರ್ವಜನಿಕವಾಗಿ ಹೋರಾಟಗಳನ್ನು ನಡೆಸಿದ ವಿಧಾನ ಪರಿಷತ್ತಿನ ಸದಸ್ಯರಾದ ಯುಬಿ ವೆಂಕಟೇಶ್ ರವರಿಗೆ ಮತ್ತು ಈ ಪ್ರಕರಣದಲ್ಲಿ ಠೇವಣಿಗಾರರೊಂದಿಗೆ ಸೇರಿ ಹೋರಾಟವನ್ನು ನಡೆಸಿದ ಡಾ.ಶಂಕರ್ ಗುಹ, ಇವರಿಗೆ ಇಂದಿಗೂ ಸಹ ಈ ಪ್ರಕರಣದಲ್ಲಿ ಸಿಬಿಐ ನವರ ನಿರಾಸಕ್ತಿಯ ಬಗ್ಗೆ ಬೇಸರವೂ ಇದೆ. ಇಲ್ಲಿ ಎಲ್ಲೋ ಏನೋ ರಾಜಕೀಯ ನಡೆಯುತ್ತಿದೆ ಎನ್ನುವ ಅನುಮಾನವೂ ಕಾಡುತ್ತಿದೆ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply