ಹಂತಕರ ವಿರುದ್ಧ ತ್ವರಿತಗತಿಯಲ್ಲಿ ವಿಚಾರಣೆ ನಡೆದು, ಕಠಿಣ ಶಿಕ್ಷೆ ಆಗಬೇಕು: ಅಪ್ಸರ್ ಕೊಡ್ಲಿಪೇಟೆ

2 years ago

ಕೊಪ್ಪಳ: ಪ್ರೀತಿ ಎಂಬ ಶಬ್ದದ ಅರ್ಥ ತಿಳಿದು ಕೊಳ್ಳದೇ ಪ್ರೀತಿ ಹೆಸರಿಗೆ ಕಳಂಕ ತರುವಂತಹ ಇಂತಹ ನೀಚ ಕೃತ ಮಾಡುತ್ತಿರುವ ಫಯಾಜ್, ಗಿರೀಶ್ ಸಾವಂತ್, ರುಕ್ಸಾನಾ ಕೊಲೆ ಆರೋಪಿ ಅಥವಾ ಮಡಿಕೇರಿಯ ಅಪ್ರಾಪ್ತ ಬಾಲಕಿಯ ಭವಿಷ್ಯವನ್ನೇ ಕೊಂದು ಹಾಕಿದ ನರಹಂತಕ ಆಗಿರಲಿ ಇಂತಹ ಆರೋಪಿತರಿಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ಆಗಬೇಕು ಎಂದು ಎಸ್ ಡಿ ಟಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯ ಗಿರೀಶ್ ಸಾವಂತ್ ನಿಂದ ಅಂಜಲಿಯ ಕೊಲೆ ಖಂಡನೀಯ. ಕೊಲೆಗಾರ ಹಿಂದೂ ಆದ ಕಾರಣ ಮೌನವಾಗಿರುವ ತುಚ್ಚ ಮನಸ್ಸಿನ ಮಾಧ್ಯಮಗಳು ಮತ್ತು ಕೋಮುವಾದಿಗಳು ಈ ಕೊಲೆಯಲ್ಲಿ ಸಮಭಾಗಿಗಳು ಎಂದು ಹೇಳಿದರು.

ರಾಜ್ಯದಲ್ಲಿ ಒಂದರ ಹಿಂದೊಂದು ಪ್ರೇಮ ಪ್ರಕರಣದ ಕೊಲೆಗಳು ನಡೆಯುತ್ತಲೇ ಇವೆ. ಹುಬ್ಬಳ್ಳಿಯಲ್ಲಿ ಅಂಜಲಿ ಎಂಬ ಯುವತಿಯನ್ನು ಗಿರೀಶ್ ಸಾವಂತ್ ಎಂಬ ಮನುಷ್ಯ ರೂಪದ ರಾಕ್ಷಸ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೊಲೆಗಾರನನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಯುವ ಸಮೂಹ ಪ್ರೀತಿ ಪ್ರೇಮದ ಹೆಸರಿನಲ್ಲಿ ಹೀಗೆ ರಕ್ತ ಹರಿಸುತ್ತಿರುವುದು ಬಹಳ ನೋವಿನ ಸಂಗತಿ. ಆದರೆ ಇಂತಹ ಸನ್ನಿವೇಶಗಳಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ, ಮನಸ್ಸಿನೊಳಗೆ ಹುದುಗಿರುವ ಧರ್ಮ ದ್ವೇಷದ ಕಾರಣಕ್ಕಾಗಿ ಕೊಲೆಗಾರನ ಧರ್ಮ ನೋಡಿ ಪ್ರತಿಭಟಿಸುವ ಅಥವಾ ಮೌನವಾಗಿ ಉಳಿಯುವ ತುಚ್ಛ ಮನಸ್ಸಿನ ಮಾಧ್ಯಮಗಳು ಮತ್ತು ಕೋಮುವಾದಿಗಳು ಈ ಕೊಲೆಯಲ್ಲಿ ಸಮಭಾಗಿಗಳಾಗುತ್ತಾರೆ ಎಂದರು.

ಇದೇ ಹುಬ್ಬಳ್ಳಿಯಲ್ಲಿ ಕೆಲ ದಿನಗಳ ಹಿಂದೆ ನೇಹಾ ಎಂಬ ಯುವತಿಯನ್ನು ಫಯಾಜ್ ಎಂಬ ಕ್ರೂರಿ ಹತ್ಯೆ ಮಾಡಿದಾಗ ಹಿಂದುತ್ವ ಹೆಸರಿನ ಕೋಮು ನಂಜಿನ ಪಡೆಗಳು ಬೀದಿಗಿಳಿದು ಬಾಯಿ ಬಡೆದುಕೊಂಡಿದ್ದವು. ಹೆಣಗಳಿಗಾಗಿ ಕಾಯುವ ಬಿಜೆಪಿ ಇದನ್ನು ಚುನಾವಣಾ ಅಸ್ತ್ರವಾಗಿ ಬಳಸಲು ನಾಚಿಕೆಯ ಎಲ್ಲಾ ಗಡಿಗಳನ್ನು ದಾಟಿ ನಿಕೃಷ್ಟವಾಗಿ ನಡೆದುಕೊಂಡಿತ್ತು ಎಂದು ವಾಗ್ದಾಳಿ ನಡೆಸಿದರು.

ದೇಶದ ಗೃಹಮಂತ್ರಿ ಅಮಿತ್ ಶಾ ತಮ್ಮ ಪಕ್ಷದ ಶಾಲು ಹಾಕಿಕೊಂಡು ಸಂತ್ರಸ್ತೆಯ ಮನೆಗೆ ಹೋಗಿ ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ಅತ್ಯಂತ ಕೀಳುಮಟ್ಟದ ಮನಸ್ಥಿತಿಯನ್ನು ಪ್ರದರ್ಶಿಸಿದ್ದರು. ಮಾಧ್ಯಮಗಳು ಸಹ ಆರೋಪಿ ಮುಸ್ಲಿಂ ಸಮುದಾಯದ ವ್ಯಕ್ತಿ ಅನ್ನುವ ಕಾರಣಕ್ಕೆ ದಿನದ 24 ಗಂಟೆ ಇಡೀ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಬಿತ್ತುವ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿತ್ತು. ಆದರೆ ಅಂಜಲಿಯ ಬರ್ಬರ ಹತ್ಯೆ ವಿಚಾರದಲ್ಲಿ ಇದೇ ಕೋಮುವಾದಿ ಪಡೆಗಳು, ಬಿಜೆಪಿ ಮತ್ತು ಮಾಧ್ಯಗಳಿಗೆ ಮೌನಕ್ಕೆ ಜಾರಿದ್ದಾರೆ. ಅವರ ಈ ಮನಸ್ಥಿತಿಗೆ ಧಿಕ್ಕಾರವಿರಲಿ ಎಂದರು.

ಇನ್ನೊಂದೆಡೆ ರಾಜ್ಯದಲ್ಲಿ ನಿರಂತರವಾಗಿ ಪ್ರೀತಿ ನಿರಾಕರಣೆ ವಿಚಾರದಲ್ಲಿ ಹೆಣ್ಣುಮಕ್ಕಳ ಕೊಲೆಯಾಗುತ್ತಿರುವುದು ಅತ್ಯಂತ ಗಾಬರಿ ಹುಟ್ಟಿಸುವ ಸಂಗತಿ. ವಾರದ ಹಿಂದಷ್ಟೇ ಕೊಡಗಿನಲ್ಲಿ ಮೀನಾ ಎಂಬ 10ನೇ ತರಗತಿ ಮುಗಿಸಿದ್ದ ಯುವತಿಯನ್ನು ಪ್ರಕಾಶ್ ಎಂಬ ಕ್ರೂರಿ ತಲೆ ಕತ್ತರಿಸಿ ಕೊಲೆ ಮಾಡಿದ್ದ. ಇಂತಹವು ಸಾಕಷ್ಟು ಘಟನೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಅಂಜಲಿ ಕೊಲೆಗೂ ಮುನ್ನ ಆರೋಪಿ ಗಿರೀಶ್ ಆಕೆಗೆ ಜೀವ ಬೆದರಿಕೆ ಒಡ್ಡಿದ್ದರ ಬಗ್ಗೆ ಆಕೆಯ ಅಜ್ಜಿ ಹಾಗೂ ಅಕ್ಕ ಪೊಲೀಸರಲ್ಲಿ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸಲೀಂ ಮನಿಯಾರ್, ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಹಾಗೂ ಉಪಾಧ್ಯಕ್ಷ ಜಹಿರ್ ಅಬ್ಬಾಸ್, ಜಿಲ್ಲಾ ಕೋಶಾಧಿಕಾರಿ ಮಹಿಬೂಬ್ ರಜಾ, ಜಿಲ್ಲಾ ಮಾಧ್ಯಮ ಉಸ್ತುವಾರಿ ಭಾಷಾ ಸುಳೇಕಲ್, ಗಂಗಾವತಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮಹಮ್ಮದ್ ಅಲಿ ಹಾಗೂ ಕಾರ್ಯದರ್ಶಿಯಾದ ಎಂ ಡಿ ಅಜರುದ್ದೀನ್ ಎಲ್ಲಾ ಅಸೆಂಬ್ಲಿಯು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply