ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯದ ವಿಷಯ ತೀವ್ರ ಕಾವು ಪಡೆದುಕೊಂಡಿದೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತುಪ್ಪ ಸುರಿಯುವ ಮೂಲಕ ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ ತೀವ್ರಗೊಂಡಿದೆ.
- ಚಿತ್ರದುರ್ಗ ಜಿಲ್ಲೆಯ ವಸತಿ ರಹಿತರಿಗೆ ಸುವರ್ಣಾವಕಾಶ
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
ಕರ್ನಾಟಕ ಬರದಿಂದ ಸಂಕಷ್ಟಕ್ಕೆ ತುತ್ತಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬರದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ.ಅಲ್ಲದೇ ಪರಿಹಾರಕ್ಕೆ ಕೇಂದ್ರದ ನೆರವು ಕೋರಿ ಮೂರು ತಿಂಗಳು ತಡವಾಗಿ ಮನವಿ ಸಲ್ಲಿಸಿದ್ದು ಈಗ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅಲ್ಲಿಂದ ತಂಡವೂ ಬಂದು ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಅದು ಸುಳ್ಳಾದರೆ ನಾನು ರಾಜೀನಾಮೆ ಕೊಡಲು ಸಿದ್ಧವಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಡುತ್ತಾರೆಯೇ ಎಂದು ಸವಾಲು ಹಾಕಿದರು.

ಮೈಸೂರಿನ ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಬರ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕೈಗೊಳ್ಳಲು ಅಗತ್ಯ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ನಾವು ಅಕ್ಟೋಬರ್ನಲ್ಲೇ ಮೂರು ಮನವಿ ಸಲ್ಲಿಸಿದ್ದೇವೆ. ಅದಾದ ಮೇಲೆ ಕೇಂದ್ರದ ಅಧಿಕಾರಿಗಳ ತಂಡ ಬಂದಿತ್ತು. ಪರಿಶೀಲನೆ ನಡೆಸಿ ವರದಿ ಕೊಟ್ಟಿದೆ. ನಾನು ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಕೊಟ್ಟಿದ್ದೆ. ಅಮಿತ್ ಶಾ ಅವರನ್ನೂ ಭೇಟಿಯಾಗಿದ್ದೆ. ಇದಾಗಿ ನಾಲ್ಕು ತಿಂಗಳಾದರೂ ಪರಿಹಾರ ಬಂದಿಲ್ಲ. ವಿಳಂಬ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು
ದೇಶದ ಗೃಹ ಸಚಿವ ಅಮಿತ್ ಶಾ ಅವರು ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ? ಸತ್ಯದ ತಲೆ ಮೇಲೆ ಒಡೆದಂತೆ ಸುಳ್ಳು ಹೇಳುತ್ತಾರೆ. ನಾವ್ಯಾಕೆ ಸುಳ್ಳು ಹೇಳೋಣ? ಎಂದರು.
ನಾವು ಕೇಂದ್ರಕ್ಕೆ ಮನವಿ ಕೊಟ್ಟಿದ್ದು, ಭೇಟಿ ಆಗಿದ್ದೆಲ್ಲವೂ ಸತ್ಯವಲ್ಲವೇ? ಆ ವೇಳೆ ಅಮಿತ್ ಶಾ ಅವರು ಡಿಸೆಂಬರ್ 23ಕ್ಕೆ ಸಭೆ ಕರೆದಿದ್ದೇನೆ, ಅಂದು ತೀರ್ಮಾನ ಮಾಡುತ್ತೇನೆ ಎಂದಿದ್ರಲ್ಲಾ ಮಾಡಿದ್ರಾ, ಅನುದಾನ ಕೊಟ್ಟಿದ್ದೀರಾ? ಅದನ್ನೆಲ್ಲ ಸಾಬೀತುಪಡಿಸಲು ಸಿದ್ಧವಿದ್ದೇನೆ. ಎಲ್ಲ ದಾಖಲೆಗಳನ್ನು ಸುಪ್ರೀಂ ಕೋರ್ಟ್ಗೇ ಕೊಟ್ಟಿದ್ದೇವೆ. ದಾಖಲೆಗಳು ಇಲ್ಲದಿದ್ದರೆ ಕೋರ್ಟ್ಗೆ ಹೋಗಲಾದೀತೇ? ಎಂದು ಸ್ಪಷ್ಟಪಡಿಸಿದರು.
ಎನ್.ಡಿ.ಆರ್.ಎಫ್. ಅಡಿ ಬರ ಪರಿಹಾರ ಹಣ ಕೊಡಲೇಬೇಕು.ಇದು ಕೇಂದ್ರ ಸರ್ಕಾರದ ಹಣ ಅಲ್ಲ ರಾಜ್ಯದ್ದೇ. ಆ ಹಣವನ್ನು ಈವರೆಗೂ ಕೊಡದ ಬಿಜೆಪಿಯವರಿಗೆ ಮತದಾರರು ಮತ ಹಾಕಬಾರದು ಎಂದು ಮನವಿ ಮಾಡಿದರು.
ಮತ್ತೊಂದೆಡೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ,ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಬರ ಪರಿಹಾರ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಮೂರು ತಿಂಗಳು ವಿಳಂಬ ಮಾಡಿದೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಸುಳ್ಳು .ರಾಜ್ಯದ 236 ತಾಲೂಕಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಹಾಗೂ 223 ತಾಲೂಕುಗಳ ಪೈಕಿ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿ ಕೇಂದ್ರಕ್ಕೆ ಸೆಪ್ಟೆಂಬರ್ 22, 2023 ಎಂದು ವರದಿ ಸಲ್ಲಿಸಿದೆ ಎಂದು ತಿಳಿಸಿದರು.

ನಾವು ಮನವಿ ಸಲ್ಲಿಸಿ ನಂತರ 10 ಸದಸ್ಯರ ಕೇಂದ್ರದ ತಂಡ ಅಕ್ಟೋಬರ್ 05 ರಿಂದ 9 ರವರೆಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿತ್ತು.ಇದಾದ ಬಳಿಕ ರಾಜ್ಯದ ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಹೆಚ್ಚುವರಿ ಮನವಿಯನ್ನು ಅಕ್ಟೋಬರ್ 9 ರಂದು ಕೇಂದ್ರಕ್ಕೆ ಸಲ್ಲಿಸಲಾಗಿತ್ತು ಎಂದು ಹೇಳಿದರು
ಬರ ಮ್ಯಾನುವೆಲ್ ನಿಯಮಾವಳಿ ಪ್ರಕಾರ ಮುಂಗಾರು ಹಂಗಾಮಿನಲ್ಲಿನ ಬರದ ವರದಿಯನ್ನು ಅಕ್ಟೋಬರ್ 31 ಹಾಗೂ ಹಿಂಗಾರಿನ ಬರದ ವರದಿಯನ್ನು ಮಾರ್ಚ್ 31 ರ ಒಳಗಾಗಿ ಸಲ್ಲಿಸಬೇಕು. ರಾಜ್ಯ ಸರ್ಕಾದ ಮುಂಗಾರಿನ ಬರದ ವರದಿಯನ್ನು ಸೆಪ್ಟೆಂಬರ್ 22 ಕ್ಕೆ ಹಾಗೂ ಹೆಚ್ಚುವರಿ ಮನವಿಯನ್ನು ಅಕ್ಟೋಬರ್ 9 ಕ್ಕೆ ಸಲ್ಲಿಸಿದ್ದು ನಿಯಮಾವಳಿ ನಿಗದಿಪಡಿಸಿದ ದಿನಾಂಕದ ಒಳಗೆ ಸಲ್ಲಿಸಲಾಗಿದೆ. ಆದರೂ ಕೂಡಾ ಕೇಂದ್ರ ಗೃಹ ಸಚಿವರು ಮನವಿಯನ್ನು ವಿಳಂಬವಾಗಿ ಸಲ್ಲಿಸಲಾಗಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಆಪಾದಿಸಿದರು
ನವೆಂಬರ್ 23,ರಂದು ಕೃಷಿ ಸಚಿವ ಹಾಗೂ ಕಂದಾಯ ಸಚಿವರು ಖುದ್ದಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಇದಾದ ನಂತರ, ಡಿಸೆಂಬರ್ 20, 2023 ರಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ನಂತರ, ಜನವರಿ 19, 2024 ರಂದು ಮುಖ್ಯಮಂತ್ರಿ ಪ್ರಧಾನಿ ಅವರಿಗೆ ಪತ್ರ ಬರೆದು ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಇಷ್ಟಾದರೂ ಕೇಂದ್ರ ತನ್ನ ನಿರ್ಲಕ್ಷ್ಯ ಧೋರಣೆ ಮುಂದುವರೆಸಿರುವುದನ್ನು ವಿರೋಧಿಸಿ ರಾಜ್ಯದ ಸಚಿವರು ಫೆಬ್ರುವರಿ 7, 2024 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಖರ್ಗೆ ವಿವರಿಸಿದರು.




