ಬೆಂಗಳೂರು: ದಸರಾ ನಂತರ ಪ್ರಾಥಮಿಕ ಶಾಲೆ ಆರಂಭಿಸುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು ಎಂಬುದು ಸರ್ಕಾರದ ನಿಲುವು ಕೂಡ ಆಗಿದೆ. ಸಾಂಕ್ರಮಿಕ ರೋಗದ ಭಯದಿಂದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಆಗಬಾರದು ಎಂಬ ಏಕೈಕ ಕಾರಣಕ್ಕೆ ಹಿಂದೇಟು ಹಾಕಲಾಗುತ್ತಿತ್ತು. ಆದರೆ ಈಗ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ ಎಂದರು.
ಶಾಲೆ ಆರಂಭ ಕುರಿತು ಬಗ್ಗೆ ತಜ್ಞರ ಜೊತೆ ಸಭೆ ನಡೆಸಿ ಅವರ ಅಭಿಪ್ರಾಯವನ್ನೂ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಖಾಸಗಿ ವಾಹಿನಿಯೊಂದಿಗೆ ನಡೆಸಿದ ಮಾತುಕತೆಯಲ್ಲಿ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಸದ್ಯ ಕೋವಿಡ್ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ. ಆದರೆ ಕೋವಿಡ್ ಆತಂಕ ಕಡಿಮೆ ಆಗಿದೆ. ಡೆಂಗ್ಯೂ ಹಾಗೂ ವೈರಲ್ ಜ್ವರ ಮಕ್ಕಳನ್ನು ಬಾಧಿಸುತ್ತಿವೆ. ಆದ್ದರಿಂದ ದಸರಾ ವೇಳೆಗೆ ಈ ಸಾಂಕ್ರಮಿಕ ರೋಗಗಳು ನಿಯಂತ್ರಣಕ್ಕೆ ಬಂದಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗುವುದು. ಆಗ ಪೋಷಕರೂ ಸಹ ತಮ್ಮ ಮಕ್ಕಳನ್ನು ನಿರಾಂತಕವಾಗಿ ಶಾಲೆಗಳಿಗೆ ಕಳುಹಿಸಬಹುದು ಎಂದು ಭರವಸೆ ನೀಡಿದರು.



