ಜಂಟಿ ಅಧಿವೇಶನಕ್ಕೆ ಲೋಕಸಭೆ ಸ್ಪೀಕರ್ ಆಹ್ವಾನಿಸಿರುವುದು ತಪ್ಪು: ಸಿದ್ದರಾಮಯ್ಯ

5 years ago

ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಲೋಕಸಭಾಧ್ಯಕ್ಷರನ್ನು ಆಹ್ವಾನಿಸಿರುವುದು ಸಂಸದೀಯ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ದವಾದುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇಂದು ನಡೆಯಲಿರುವ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರಿಗೆ ಮಾತಾಡಲು ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಶಾಸಕರು ಬಹಿಷ್ಕರಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಾತ್ರ ಪಾಲ್ಗೊಳ್ಳಲು ನಿಯಮಾವಳಿಗಳಲ್ಲಿ ಅವಕಾಶವಿದೆ. ಲೋಕಸಭಾಧ್ಯಕ್ಷರ ಕಾರ್ಯಕ್ರಮವನ್ನು ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಸಿ ಎಂದು ಹೇಳಿದ್ದೆವು. ಅವರು ಒಪ್ಪದೆ ಇದ್ದ ಕಾರಣ ಬಹಿಷ್ಕಾರ ಅನಿವಾರ್ಯವಾಗಿದೆ ಎಂದಿದ್ದಾರೆ.

ಲೋಕಸಭಾದ್ಯಕ್ಷರನ್ನು ವಿಧಾನಮಂಡಲಕ್ಕೆ ಆಹ್ವಾನಿಸುವುದು ಒಂದು ಕೆಟ್ಟ ಸಂಪ್ರದಾಯವಾಗಿದೆ. ಈಗಲೂ ಕಾಲ ಮಿಂಚಿಲ್ಲ, ವಿಧಾನಸಭಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಈ‌ ಕಾರ್ಯಕ್ರಮವನ್ನು ವಿಧಾನಮಂಡಲದಿಂದ ಬ್ಯಾಂಕ್ವೆಟ್ ಸಭಾಂಗಣಕ್ಕೆ ಸ್ಥಳಾಂತರಿಸಿ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Reply