ಬೆಂಗಳೂರು: ಇನ್ನೂ ಈ ವರ್ಷದ ಬೇಸಿಗೆ ಕಾಲವೇ ಆರಂಭವಾಗಿಲ್ಲ, ಆದರೆ ಈಗಾಗಲೇ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಮ್ಮ I.N.D.I ಮೈತ್ರಿಕೂಟದ ಡಿಎಂಕೆ ಪಕ್ಷದ ಜೊತೆ ದೋಸ್ತಿ ಉಳಿಸಿಕೊಳ್ಳಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ಕಾವೇರಿ ನೀರನ್ನ ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿದ ನಾಡದ್ರೋಹಿ @INCKarnataka ಸರ್ಕಾರ ಈಗ ಬೆಂಗಳೂರಿನ ಜನತೆ ಖಾಸಗಿ ಟ್ಯಾಂಕರ್ ಗಳಿಗೆ ಸಾವಿರಾರು ರೂಪಾಯಿ ತೆತ್ತುವ ಪರಿಸ್ಥಿತಿ ತಂದಿಟ್ಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಬೆಂಗಳೂರಿನ ನೀರಿನ ಕೊರತೆ ಕುರಿತ ಸುದ್ದಿ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ಬರ ಪರಿಸ್ಥಿತಿಯಿಂದ ಬೆಂಗಳೂರು ನಗರದಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ಮೊದಲೇ ಅಂದಾಜಿಸಿ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಲು, ಹಳೇ ಕೊಳವೆ ಬಾವಿಗಳ ಮರುಪೂರಣ ಮಾಡಲು, ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕಲು ಕ್ರಮ ಕೈಗೊಂಡಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಾಯಿಮಾತಿಗೆ ಘೋಷಣೆ ಮಾಡಿ ಆಡಳಿತದ ಚುಕ್ಕಾಣಿಯನ್ನು ಸಂಪೂರ್ಣವಾಗಿ ಅಧಿಕಾರಿಗಳಿಗೆ ಕೊಟ್ಟು ಕಾಂಗ್ರೆಸ್ ನಾಯಕರು ಸದಾ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಪಕ್ಕದ ರಾಜ್ಯಗಳ ಚುನಾವಣೆ ಉಸಾಬರಿ ನೋಡಿಕೊಳ್ಳಲು ಕಾಲಹರಣ ಮಾಡುತ್ತಾ ಬೆಂಗಳೂರನ್ನ ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ ಪರಿಣಾಮ ಇವತ್ತು ಬೆಂಗಳೂರಿನ ಜನರು ಹನಿ ನೀರಿಗೂ ಪರದಾಡುವ ದುಸ್ಥಿತಿ ಬಂದಿದೆ ಎಂದಿದ್ದಾರೆ.
ಸಿಎಂ @siddaramaiah ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿಸಿಎಂ @DKShivakumar ಅವರು ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ರಾಜಕಾರಣ ಬಿಟ್ಟು ಜನಕಾರಣದತ್ತ ಗಮನ ಹರಿಸಿ ಬೆಂಗಳೂರಿನ ಜನತೆಗೆ ಕನಿಷ್ಠ ಪಕ್ಷ ಕುಡಿಯುವ ನೀರಿನ ಗ್ಯಾರೆಂಟಿ ಆದರೂ ಕೊಡಬೇಕು ಎಂದಿದ್ದಾರೆ.




