ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ನಿರ್ಣಯ ಖಂಡಿಸಿ ಬಿಜೆಪಿ, ಜೆಡಿಎಸ್ ಧರಣಿ

2 years ago

ಬೆಂಗಳೂರು: ಬೆಂಬಲ ಬೆಲೆಗೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಹಾಗೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ಖಂಡಿಸಿ ವಿಧಾನಸಭೆಯಲ್ಲಿ ನಿನ್ನೆ ಕೈಗೊಂಡ ನಿರ್ಣಯವನ್ನು ವಿರೋಧಿಸಿ ವಿಪಕ್ಷ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿ ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಅಶೋಕ್ ಮಾತನಾಡಿ, ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದ ವಿರುದ್ಧ ಏಕಾಏಕಿ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ವಾಪಸ್ ಪಡೆಯಬೇಕು ಎಂದರು.

ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿಲ್ಲ. ಯಾವುದೇ ಮಾಹಿತಿ ನೀಡದೆ ಏಕಾಏಕಿ ನಿರ್ಣಯ ಮಂಡಿಸಲಾಗಿದೆ.ಕೇಂದ್ರ ಸರ್ಕಾರದ ವಿರುದ್ಧ ಸದನದ ಹೊರಗೆ ಮಾತನಾಡಬಹುದು. ಆದರೆ, ಸದನಲ್ಲಿ ನಿರ್ಣಯ ಮಂಡಿಸಲು ನಿಯಮಾವಳಿ ಪಾಲಿಸಬೇಕು. ನಿನ್ನೆ ತಂದಂತಹ ನಿರ್ಣಯ ಕಾರ್ಯಸೂಚಿಯಲ್ಲೂ ಇಲ್ಲ. ನಿಯಮಾವಳಿ ಪ್ರಕಾರ ಇಲ್ಲ. ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿಲ್ಲ ಎಂದರು.

ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂವಿಧಾನ ವಿರೋಧಿ ನಿರ್ಣಯ ಮಂಡಿಸಿದ್ದಾರೆ ಎಂದರು.

ಈ ವೇಳೆ ಸರ್ಕಾರದ ನಿಲುವು ಸಮರ್ಥಿಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ, ಕರ್ನಾಟಕದ ಹಿತ ರಕ್ಷಣೆ ಮಾಡುವ ಅಂಶಗಳು ನಿರ್ಣಯದಲ್ಲಿವೆ. ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನಷ್ಟೇ ಹೇಳಿದ್ದೇವೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ನಾಡಿನ ಏಳು ಕೋಟಿ ಜನರ ಮತ್ತು ಸದನದ ಒಕ್ಕೊರಲ ಧ್ವನಿ ಇದರಲ್ಲಿ ಅಡಗಿದೆ ಎಂದರು.

ಕಾನೂನು ಮತ್ತು ನಿಯಮಾವಳಿ ಪ್ರಕಾರವೇ ನಿರ್ಣಯ ಮಂಡಿಸಿದ್ದೇವೆ. ಕರ್ನಾಟಕದ ಹಿತರಕ್ಷಣೆಗೆ ಸಂಬಂಧಿಸಿದ ಅಂಶಗಳು ನಿರ್ಣಯದಲ್ಲಿವೆ. ಅನ್ಯಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಂಕಿ-ಅಂಶಗಳ ಸಹಿತ ಮಂಡನೆ ಮಾಡಿ ಅನುಮೋದನೆ ಪಡೆದಿದ್ದೇವೆ. ನಿಮಗೆ ರಾಜಕೀಯ ಬೇಕೋ? ಜನರ ಹಿತರಕ್ಷಣೆ ಬೇಕೋ ಎಂಬುದನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಇದನ್ನು ವಿರೋಧಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಮತ್ತು ರಾಜ್ಯದ ನಡುವೆ ಅನುದಾನ ಹಂಚಿಕೆ, ಅಧಿಕಾರಕ್ಕೆ ಸಂಬಂಧಿಸಿದಂತೆ ಕಳೆದ 75 ವರ್ಷಗಳಿಂದಲೂ ಚರ್ಚೆ ನಡೆಸಲಾಗುತ್ತಿದೆ. ಒಟ್ಟು55 ವರ್ಷಗಳ ಕಾಲ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಆಡಳಿತ ನಡೆಸಿವೆ ಎಂದರು.

ಇದಕ್ಕೆ ಆಡಳಿತ ಪಕ್ಷದ ಶಾಸಕರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕಾವೇರಿದ ವಾತಾವರಣ ಉಂಟಾಯಿತು. ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ವಾಗ್ವಾದ ನಡೆದು ಇಡೀ ಸದನ ಗೊಂದಲದ ಗೂಡಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಕೆಲ ಕಾಲ ಮುಂದೂಡಿದರು.

ಮತ್ತೆ ಸದನ ಸಮಾವೇಶಗೊಂಡಾಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿದರು. ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ, ಕಾರ್ಯಕಲಾಪಗಳ ಪಟ್ಟಿಯಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ ಸೇರಿದಂತೆ ಸಾಕಷ್ಟು ಮಹತ್ವದ ವಿಚಾರಗಳಿವೆ. ಕಾರ್ಯಕಲಾಪಗಳ ಪಟ್ಟಿ ಪ್ರಕಾರ ಸದನ ನಡೆಸಬೇಕು ಎಂದು ಕೋರಿದರು.

ಆಗ ಅಶೋಕ್ ಮಾತನಾಡಿ, ಸದನದ ಕಾರ್ಯಕಲಾಪಗಳನ್ನು ನಡೆಸಲು ನಾವು ಸಹಕರಿಸುತ್ತೇವೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧ ಏಕಾಏಕಿ ಮಂಡನೆ ಮಾಡಿ ಅಂಗೀಕರಿಸಿರುವ ನಿರ್ಣಯವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನಮಗೂ ನಿರ್ಣಯ ಮಂಡನೆಗೆ ಅವಕಾಶ ಮಾಡಿಕೊಡಬೇಕು ಎಂದರು. ಅಲ್ಲದೆ ಕೇಂದ್ರ ಸರ್ಕಾರವನ್ನು ಪ್ರಶಂಸಿಸುವ ಸಿದ್ಧಪಡಿಸಿದ ನಿರ್ಣಯವನ್ನು ಮಂಡಿಸಿದರು.

ಈ ಹಂತದಲ್ಲಿ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನಲ್ಲಿ ಕಾವೇರಿದ ವಾತಾವರಣ ಉಂಟಾಯಿತು. ಪ್ರತಿಪಕ್ಷಗಳ ಸದಸ್ಯರು ಧರಣಿ ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಭಾಧ್ಯಕ್ಷರು ಕಾರ್ಯಕಲಾಪ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು. ಆಗಲೂ ಗದ್ದಲ ಮುಂದುವರೆಯಿತು. ಗದ್ದಲದ ನಡುವೆ ಸಭಾಧ್ಯಕ್ಷರು ಕಾರ್ಯದರ್ಶಿಯವರ ವರದಿ ಮಂಡನೆ ಹಾಗೂ ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ ಮಂಡನೆಗೆ ಅವಕಾಶ ನೀಡಿ ಶಾಸನ ರಚನಾ ಕಲಾಪ ಕೈಗೆತ್ತಿಕೊಂಡು ವಿಧೇಯಕ ಮಂಡನೆ ಹಾಗೂ ಅನುಮೋದನೆಗೆ ಅವಕಾಶ ಕಲ್ಪಿಸಿದರು.

ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ, 2024ನೇ ಸಾಲಿನ ಕರ್ನಾಟಕ ವಿಧಾನ ಮಂಡಲ(ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕ ಮಂಡಿಸಿ ಅನುಮೋದನೆ ಪಡೆದರು.

ನಂತರ ಕಂದಾಯ ಸಚಿವ ಕೃಷ್ಣಭೈರೇಗೌಡ, 2024ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನುಮಂಡಿಸಿ ಅನುಮೋದನೆ ಪಡೆದರು. ಬಳಿಕ ಸಭಾಧ್ಯಕ್ಷರು ವಿಧಾನ ಪರಿಷತ್ತಿನಿಂದ ಅನುಮೋದನೆಗೊಂಡಿರುವ 7 ವಿಧೇಯಕಗಳ ಮಾಹಿತಿಯನ್ನು ಸದನದ ಮುಂದಿಟ್ಟರು. ಆ ನಂತರ ಸದನಲ್ಲಿ ಗೊಂದಲದ ವಾತಾವರಣ ತಿಳಿಯಾಗುವ ಸೂಚನೆಗಳು ಕಂಡುಬರದ ಹಿನ್ನೆಲೆಯಲ್ಲಿ ಸದನದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

Leave a Reply