ಬೆಂಗಳೂರು: ಬಿಜೆಪಿಯಲ್ಲಿ ಎಲ್ಲವೂ ಸರಿ ಹೋಗಿದೆ ಎಂದುಕೊಂಡ ರಾಜ್ಯ ನಾಯಕರು ಇದೀಗ ಮತ್ತೊಂದು ಸುತ್ತಿನ ಸಂಘರ್ಷ ಎದುರಿಸಬೇಕಾಗಿದೆ. ರಾಜ್ಯಸಭೆ ಟಿಕೆಟ್ ಪ್ರಕಟವಾದ ಬೆನ್ನಲ್ಲೇ ಮಾಜಿ ಸಚಿವ, ಬಿಜೆಪಿಯ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ನಾಯಕತ್ವದ ವಿರುದ್ಧ ಗುಟುರು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ತನಗೆ ಹೊಂದಾಣಿಕೆ ರಾಜಕಾರಣ ಮಾಡಿ ಗೊತ್ತಿಲ್ಲ. ಅದನ್ನು ಮಾಡಿ ರಾಜಕಾರಣದಲ್ಲಿರುವ ಉಮೇದಿಯೂ ನನಗಿಲ್ಲ, ಪ್ರಶಸ್ತಿಗಳಿಗಾಗಿ ಮತ್ತು ಟಿಕೆಟ್ ಇಲ್ಲವೇ ಅಧಿಕಾರಕ್ಕಾಗಿ ವಶೀಲಿ ಮಾಡಿದವನಲ್ಲ ಎಂದರು.
ತಮ್ಮರಾಜಕೀಯ ಬದುಕಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರಿಬ್ಬರಿಗೆ ಬಿಟ್ಟರೆ ಯಾರಿಗೂ ಕಾಲು ಮುಟ್ಟಿ ನಮಸ್ಕರಿಸಿದವನಲ್ಲ. ಹೊಂದಾಣಿಕೆ ಮಾಡಿಕೊಂಡರೆ ಭವಿಷ್ಯ ಚೆನ್ನಾಗಿರುತ್ತೆ ಅಂತ ಬಹಳಷ್ಟು ಜನ ಹೇಳುತ್ತಾರೆ, ಅದು ತನಗೆ ಬೇಕಿಲ್ಲ, ಲೋಕಸಭಾ ಚುನಾವಣೆಯ ಬಳಿಕ ತನಗೊಂದು ಗತಿ ಕಾದಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ, ಹಾಗಂತ ವಶೀಲಿ ಮಾಡುವ ಜಾಯಮಾನ ತನ್ನದಲ್ಲ ಎಂದರು.
ಅಪ್ಪ ಮಗನಿಗೆ ಹೆದರುವ ಜಾಯಮಾನ ನನ್ನದಲ್ಲ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದೇನೆ. ಚುನಾವಣೆ ಮುಗಿದ ನಂತರ ಇವರ ಎಲ್ಲಾ ಬಂಡವಾಳ ಬಯಲು ಮಾಡುತ್ತೇನೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸೋಮಣ್ಣ ಅವರನ್ನು ಸೋಲಿಸಿದರು. ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಮತ್ತು ವಿಜಯಪುರದಲ್ಲಿ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಯಾರಿಗೆಲ್ಲ ದುಡ್ಡು ಕೊಟ್ಟರು, ಯಾರೆಲ್ಲರ ಜೊತೆ ಮಾತನಾಡಿದರು, ಎಲ್ಲಾ ವಿವರಗಳು ತಮ್ಮ ಬಳಿ ಇವೆ. ಸಮಯಕ್ಕಾಗಿ ಕಾಯುತ್ತಿದ್ದೇನೆ. ಆಗ ಅದನ್ನು ಬಹಿರಂಗಪಡಿಸುತ್ತೇನೆ. ಈ ವಿಷಯದಲ್ಲಿ ಯಾರಿಗೂ ಹೆದರುವ ಮಾತೇ ಇಲ್ಲ ಎಂದರು.
ರಾಜ್ಯದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸುತ್ತಿಲ್ಲ. ಪ್ರಧಾನಿ ಮೋದಿ ಅಮಿತ್ ಶಾ ನೇತೃತ್ವದಲ್ಲಿ ಮತ್ತು ಶ್ರೀ ರಾಮನ ಹೆಸರಿನಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕ ಸಂಸದರು ಆಯ್ಕೆ ಮಾಡಲಿದೆ ಎಂದರು.
ಅಪ್ಪ ಮಕ್ಕಳ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ, ವಿಜಯೇಂದ್ರ ಅವರಿಂದ ನನಗೇನು ಆಗಬೇಕಾಗಿಲ್ಲ. ನಾನೇನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿಲ್ಲ. ಹೆದರಿಕೊಂಡು ಬಾಯಿ ಮುಚ್ಚಿ ಕುಳಿತಿದ್ದೇನೆ ಎಂದು ಭಾವಿಸಬೇಡಿ. ಚುನಾವಣೆ ಮುಗಿದ ಮೇಲೆ ಇವರ ಇತಿಹಾಸವನ್ನು ತೆಗೆದಿಡುತ್ತೇನೆ ಎಂದರು.
ಒಟ್ಟಿನಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಹಾಗೂ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಯತ್ನಾಳ್ ಮಾಡಿರುವ ಆರೋಪ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಮೂರು ದಿನಗಳ ಹಿಂದೆ ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ನಿವಾಸದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ನಡೆದ ಮಾತುಕತೆಯ ಪರಿಣಾಮದಿಂದ ಬಿಜೆಪಿಯಲ್ಲಿ ಉಂಟಾಗಿದ್ದ ಎಲ್ಲಾ ಗೊಂದಲಗಳು ಬಗೆಹರಿದಿವೆ ಎಂದೇ ಹೇಳಲಾಗಿತ್ತು. ಆದರೆ ಇದೀಗ ಬಸನಗೌಡ ಪಾಟೀಲ ಯತ್ನಾಳ್ ನೀಡಿರುವ ಹೇಳಿಕೆ ಬಿಜೆಪಿಯಲ್ಲಿ ಇನ್ನೂ ಕೂಡ ಭಿನ್ನಮತ ಆರಿಲ್ಲ ಎಂಬುದನ್ನು ಜಾಹೀರುಮಾಡಿದೆ.




