ಬೆಂಗಳೂರು: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಜನರಿಗೆ ನಾಮ ಹಾಕುವ ಗ್ಯಾರಂಟಿಯನ್ನೂ ನೀಡಿದೆ. ಖಜಾನೆ ಖಾಲಿ ಮಾಡಿಕೊಂಡ ಸರ್ಕಾರ ಬೀಗ ಹಾಕಿಕೊಳ್ಳುವ ಸ್ಥಿತಿ ಬಂದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬಿಜೆಪಿ ವತಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ದೆಹಲಿಗೆ ಮಜಾ ಮಾಡಲು ಹೋಗಿದ್ದು, ವಿಧಾನಸೌಧ ಖಾಲಿಯಾಗಿ ಅಧಿಕಾರಿಗಳಿಗೆ ಕೆಲಸವಿಲ್ಲದಂತಾಗಿದೆ. ಬೆಂಗಳೂರಿನಲ್ಲಿ 30% ಕಾವೇರಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದರು.
ಬಿಜೆಪಿ ಅವಧಿಯಲ್ಲಿ 8 ಟಿಎಂಸಿ ನೀರು ಹೆಚ್ಚುವರಿಯಾಗಿತ್ತು. ಆದರೆ ಈಗ ತಮಿಳುನಾಡಿನ ಬ್ರದರ್‌ಗಳಿಗೆ ನೀರು ನೀಡಲಾಗಿದೆ. ಬರಗಾಲದ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಐದು ಗ್ಯಾರಂಟಿ ಜೊತೆಗೆ ನಾಮ ಹಾಕುವ ಗ್ಯಾರಂಟಿಯನ್ನೂ ನೀಡಲಾಗಿದೆ ಎಂದರು.
ಒಂದೊಂದು ಗ್ಯಾರಂಟಿಗೂ ಹೆಚ್ಚು ಸಮಯ ತೆಗೆದುಕೊಂಡು ಜನರಿಗೆ ಪಂಗನಾಮ ಹಾಕಲಾಗಿದೆ. ಈ ನಾಮದ ಗ್ಯಾರಂಟಿಯನ್ನು ಎಲ್ಲರಿಗೂ ತಲುಪಿಸಲು 80 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಬರಕ್ಕೆ 100 ಕೋಟಿ ನೀಡುತ್ತೇನೆಂದು ಹೇಳಿ, ಶಾಸಕರಿಗಾಗಿ 300-400 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಮುಸ್ಲಿಮರ ಕಲ್ಯಾಣಕ್ಕೆ 1 ಸಾವಿರ ಕೋಟಿ ರೂ. ನೀಡಿ, ರೈತರಿಗೆ ಆತ್ಮಹತ್ಯೆ ಭಾಗ್ಯ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಬಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಮೂಲಕ 6 ಸಾವಿರ ರೂ. ನೀಡಿದರೆ ಬಿ.ಎಸ್.ಯಡಿಯೂರಪ್ಪ 4 ಸಾವಿರ ರೂ. ನೀಡಿದರು. ಮನೆ ಹಾಳು ಕಾಂಗ್ರೆಸ್ಸಿಗರು ಅದನ್ನೂ ಕಿತ್ತುಕೊಂಡರು. ಬಸವರಾಜ ಬೊಮ್ಮಾಯಿ ತಂದ ರೈತ ವಿದ್ಯಾನಿಧಿಗೆ ಬೆಂಕಿ ಹೆಚ್ಚಿದರು. ಇದು ಯಾವ ರೀತಿಯ ರೈತ ಕಾಳಜಿ? ಎಂದರು.
ಕೈಗಾರಿಕೆಗೆ ವಿದ್ಯುತ್ ನೀಡದೆ ಸಣ್ಣ ಉದ್ಯಮಗಳು ಸ್ಥಗಿತಗೊಳ್ಳುತ್ತಿವೆ. ರೈತರಿಗೆ ಏಳು ಗಂಟೆ ವಿದ್ಯುತ್ ಎಂದು ಹೇಳಿ ಎರಡು ಗಂಟೆಯೂ ನೀಡುತ್ತಿಲ್ಲ. ಸರ್ಕಾರದಲ್ಲೇ ವೋಲ್ಟೇಜ್ ಇಲ್ಲವಾಗಿದೆ. ಒಂಬತ್ತು ತಿಂಗಳಿಂದ ಶಾಸಕರು ಅಭಿವೃದ್ಧಿಯ ಅನುದಾನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ʼನಾಳೆ ಬಾʼ ಎಂದು ಫಲಕ ಹಾಕಿಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯನವರು ಎಂದೂ ಏಕವಚನ ಬಳಸಲ್ಲ. ಆದರೆ ರಾಷ್ಟ್ರಪತಿಗಳಿಗೆ ಏಕವಚನ ಬಳಸುತ್ತಾರೆ. ಯಾವಾಗಲೂ ವ್ಯಾಕರಣ, ಗಣಿತ ಪಾಠ ಮಾಡುವ ಅವರು ಎಲ್ಲರಿಗೂ ಅಗೌರವ ತೋರುತ್ತಾರೆ. ಇದೇ ಕಾಂಗ್ರೆಸ್‌ನ ಸಂಸ್ಕೃತಿ ಎಂದರು.
ಹಿಂದಿನ ಬಿಜೆಪಿ ಅವಧಿಯಲ್ಲಿ ಎನ್ ಡಿಆರ್ ಎಫ್ ದರಕ್ಕಿಂತ ಅಧಿಕ ದರವನ್ನು ಪರಿಹಾರವಾಗಿ ರೈತರಿಗೆ ನೀಡಲಾಗಿತ್ತು. ಸಾಲ ಮಾಡಿ ರೈತರ ಜೊತೆ ನಿಲ್ಲೋಣ ಎಂದು ಬಿಜೆಪಿ ಯೋಚಿಸಿದರೆ, ಸಾಲ ಮಾಡಿ ಕಾರ್ಯಕರ್ತರಿಗೆ ಬಿರಿಯಾನಿ ತಿನ್ನಿಸೋಣ ಎಂದು ಕಾಂಗ್ರೆಸ್ ಆಲೋಚಿಸುತ್ತಿದೆ. ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು 2013ರಲ್ಲಿ ಪರಿಹಾರ ನೀಡಲು 9 ತಿಂಗಳು ತೆಗೆದುಕೊಂಡರು. 2014 ರಲ್ಲಿ 8 ತಿಂಗಳು ತೆಗೆದುಕೊಂಡರು. ಬಿಜೆಪಿ ಅವಧಿಯಲ್ಲಿ 2021 ರಲ್ಲಿ ಪ್ರವಾಹ ಪರಿಹಾರ ಕೇವಲ 2 ತಿಂಗಳಲ್ಲಿ ಪಾವತಿಯಾಗಿದೆ ಎಂದರು.
ಪ್ರತಿಭಟನೆ ವೇಳೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದರು.




