ದೇಶ ಒಡೆಯುವ ದೇಶದ್ರೋಹದ ಮಾತಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡು:ಆರ್.ಅಶೋಕ

2 years ago

ಬೆಂಗಳೂರು: ಮಾತೆತ್ತಿದರೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ನಾವು ಎಂದು ಬೊಗಳೆ ಬಿಡುವ ಕಾಂಗ್ರೆಸ್ ಪಕ್ಷ ಈಗ ದೇಶ ಒಡೆಯುವ ದೇಶದ್ರೋಹದ ಮಾತಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ವಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.

ಕರ್ನಾಟಕಕ್ಕೆ ಅನ್ಯಾಯವಾದರೆ ಪ್ರತ್ಯೇಕ ರಾಷ್ಟ್ರ ಬೇಡಿಕೆ ತಪ್ಪಲ್ಲ ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಆರ್.ಅಶೋಕ, 200 ವರ್ಷಗಳ ಕಾಲ ಅದೆಷ್ಟೋ ಹೋರಾಟಗಳು, ಲೆಕ್ಕವಿಲ್ಲದಷ್ಟು ಸ್ವಾತಂತ್ರ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ನಮ್ಮ ದೇಶಕ್ಕೆ ಬಂದ ಸ್ವಾತಂತ್ರ, ಸಾರ್ವಭೌಮತೆ, ಅಖಂಡತೆಯನ್ನು ಛಿದ್ರಮಾಡುವ ಮನಸ್ಥಿತಿ ಇರುವವರು ಕೇವಲ ರಾಜಕಾರಣದಲ್ಲಲ್ಲ ಈ ದೇಶದಲ್ಲೇ ಇರಲು ನಾಲಾಯಕ್ಕು ಎಂದಿದ್ದಾರೆ.

ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ಈ ದೇಶದ್ರೋಹಿ ಹೇಳಿಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮಾಡಿದ ಅಪಮಾನ. “ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಎಂದು ನಾಡಗೀತೆಯ ಮೂಲಕ ಕನ್ನಡಾಂಬೆ ಭಾರತಾಂಬೆಯ ನೆಚ್ಚಿನ ಮಗಳು ಎಂದು ಸಾರಿದ ಕುವೆಂಪು ಅವರ ಚಿಂತನೆಗೆ ಮಾಡಿದ ಅವಮಾನ ಎಂದಿದ್ದಾರೆ.

ಒಂದು ಕಡೆ @INCIndia ನಾಯಕ @RahulGandhi ಅವರು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ಇತ್ತ @INCKarnataka ನಾಯಕ ಹಾಗೂ ಸಂಸದ @DKSureshINC ಅವರು ಭಾರತ್ ತೋಡೋ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯ ಫಲವಾಗಿ ಈಗಾಗಲೇ ಒಮ್ಮೆ ದೇಶ ವಿಭಜನೆ ಅನುಭವಿಸಿದ್ದು, ಈಗ ಮತ್ತೂಮ್ಮೆ ಭಾರತವನ್ನ ಒಡೆಯುವ ಮಾತನಾಡುತ್ತಿದ್ದಾರೆ. ದೇಶದ ಅಖಂಡತೆ, ಸಾರ್ವಭೌಮತೆ ಕಾಪಾಡುವ ಪ್ರಮಾಣ ವಚನ ಸ್ವೀಕರಿಸಿದ ಸಂಸದರೊಬ್ಬರು ಈ ರೀತಿ ಮಾತನಾಡುವುದು ಕಾಂಗ್ರೆಸ್ ಪಕ್ಷದ ವಿಭಜನಕಾರಿ ಮನಸ್ಥಿತಿಯನ್ನ ತೋರಿಸುತ್ತದೆ ಎಂದಿದ್ದಾರೆ.

ಈ ನಾಡದ್ರೋಹಿ, ದೇಶದ್ರೋಹಿ ಕಾಂಗ್ರೆಸ್ ಪಕ್ಷವನ್ನ ಈ ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಭಾರತ್ ಜೊಡೋ ಎಂದು ಬಾಯಿ ಮಾತಲ್ಲಿ ಹೇಳುತ್ತಾ ಒಳಗೊಳಗೆ ಭಾರತ್ ತೋಡೋ ಮಾಡುವ ಅಜೆಂಡಾ ಇಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷದ ಹುನ್ನಾರ ಸಫಲವಾಗಲು ಭಾರತೀಯರು ಎಂದಿಗೂ ಬಿಡುವುದಿಲ್ಲ ಎಂದಿದ್ದಾರೆ.

ಆದರೆ ಈ ಹಿಂದೆ ಬಿಜೆಪಿ ನಾಯಕ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯದ ಕೂಗು ಎತ್ತುತ್ತಿದ್ದ ಸಂಗತಿ ಕುರಿತು ಅಶೋಕ್ ಮೌನವಾಗಿದ್ದರು. ಇನ್ನೊಂದು ಸಂಗತಿಯೆಂದರೆ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ವಿನಾಯಕ ದಾಮೋದರ ಸಾವರ್ಕರ್. ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದವು. ಆಗ ಇದರ ಪರವಾಗಿ ವಿ.ಡಿ.ಸಾವರ್ಕರ್ ನಿಲುವು ತಳೆದಿದ್ದರು. ಈ ಸಂಗತಿಯನ್ನು ಅಶೋಕ್ ಅವರು ಮರೆತಂತಿದೆ.

Leave a Reply