ಅನ್ನದಾತ ಸಾಲದ ಶೂಲದಿಂದ ಆತ್ಮಹತ್ಯೆ ಮಾಡಿಕೊಳ್ಳುವಾಗ ಬಿಜೆಪಿ, ಸಂಘ ಪರಿವಾರ ರಕ್ಷಣೆಗೆ ಬರಲಿಲ್ಲ: ಬಿಎಸ್ಪಿ

2 years ago

ರಾಷ್ಟ್ರಧ್ವಜ ಹಾರಿಸುತ್ತೇವೆಂದು ಅನುಮತಿ ಪಡೆದು ಭಗವಾಧ್ವಜ ಹಾರಿಸಿರುವ ಕಿಡಿಗೇಡಿಗಳನ್ನು ಬಂಧಿಸಿ: ಬಿಎಸ್ಪಿ ಆಗ್ರಹ

ಬೆಂಗಳೂರು: ಕೆರಗೋಡು ಗ್ರಾಮ ಪಂಚಾಯತ್ ಪಿ ಡಿ ಓ ಮತ್ತು ಕೆರಗೋಡು ಪೊಲೀಸ್ ಠಾಣೆಯ ಎಸ್ಐಯನ್ನು ಅಮಾನತುಗೊಳಿಸಿ. ರಾಷ್ಟ್ರಧ್ವಜ ಹಾರಿಸುತ್ತೇವೆಂದು ಅನುಮತಿ ಪಡೆದು ಭಗವಧ್ವಜ ಹಾರಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಎಂದು ಬಿಎಸ್ಪಿ ಒತ್ತಾಯಿಸಿದೆ.

ಮಂಡ್ಯ ಅನ್ನದಾತ ರೈತಾಪಿ ವರ್ಗದ ಜಿಲ್ಲೆ. ರೈತರಿಗೆ ಕೃಷಿಯೇ ಧರ್ಮ. ಅನ್ನದಾತ ಬೆಳೆಗೆ ಬೆಲೆ ಇಲ್ಲದಾಗ, ಸಾಲದ ಶೂಲದಿಂದ ಆತ್ಮಹತ್ಯೆ ಮಾಡಿಕೊಳ್ಳುವಾಗ ಈ ಬಿಜೆಪಿ ಸರ್ಕಾರ ಸಾಲ ಮನ್ನಾ ಮಾಡಲಿಲ್ಲ. ಸಂಘ ಪರಿವಾರ ರಕ್ಷಣೆಗೆ ಬರಲಿಲ್ಲ ಎಂದು ಹೇಳಿದೆ.

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ 20 ಲಕ್ಷ ಕೋಟಿಯಷ್ಟು ಉದ್ಯಮಿಗಳ (ಕೇವಲ ನೂರು ಉದ್ಯಮಿಗಳ ) ಸಾಲವನ್ನು ರೈಟ್ ಆಫ್ ಮಾಡಲಾಗಿದೆ. ಆದರೆ ಕೇವಲ 10 -15 ಲಕ್ಷ ಕೋಟಿಯಷ್ಟಿರುವ ರೈತರ ಸಾಲವನ್ನು  ರೈಟ್ ಆಫ್ ಅಥವಾ ಮನ್ನ ಮಾಡಿಲ್ಲ ಎಂದು ಆರೋಪಿಸಿದೆ.

ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ ಮೋದಿ ಸರ್ಕಾರ ರೈತರ ಭೂಮಿಯನ್ನು ಕಸಿದುಕೊಳ್ಳುವ ಕಾಯಿದೆ ಜಾರಿ ಮಾಡಿತ್ತು. ಇಂತಹ ಬಿಜೆಪಿ ಮತ್ತು ಸಂಘ ಪರಿವಾರದ ಬೆಂಬಲಿಗರು, ರೈತರ ಜಿಲ್ಲೆಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆಂದು ಅನುಮತಿ ಪಡೆದು ಭಗವಾಧ್ವಜ ಹಾರಿಸಿದ್ದಾರೆ ಎಂದು ಹೇಳಿದೆ.
    
ವಾಸ್ತವವಾಗಿ ಜಿಲ್ಲಾಡಳಿತ ಮತ್ತು ಪೊಲೀಸರು ಅನುಮತಿ ಉಲ್ಲಂಘಿಸಿದ ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗಟ್ಟ ಬೇಕಾಗಿತ್ತು. ಆದರೆ ಅವರ ಉದಾರ ಮನೋಭಾವ ದುರುಪಯೋಗ ಪಡಿಸಿಕೊಂಡಿರುವ ಕಿಡಿಗೇಡಿಗಳು ಈ ಧ್ವಜ ಸ್ತಂಭವನ್ನು ರಾಜಕೀಯ ಮೆಟ್ಟಿಲಾಗಿ ಬಳಸುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದೆ.
    
ರಾಜ್ಯದ ಕಾಂಗ್ರೆಸ್ ಸರ್ಕಾರ ಇಂತಹ ಸೂಕ್ಷ್ಮ ಘಟನೆಗಳನ್ನು ಕುತ್ತಿಗೆಗೆ ಬರುವವರೆಗೆ ನಿರ್ಲಕ್ಷ್ಯ ವಹಿಸಿ, ಪರೋಕ್ಷವಾಗಿ ಕೋಮುಗಲಭೆಗೆ ತಾನೇ ಕುಮ್ಮಕ್ಕು ಕೊಡುತ್ತಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರ ರೈತಾಪಿ ವರ್ಗವನ್ನು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ದುರುಪಯೋಗಪಡಿಸಿಕೊಳ್ಳಲು ಹೊರಟಿದೆ ಎಂದು ಅಭಿಪ್ರಾಯಪಟ್ಟಿದೆ.
    
ರೈತರು ಎಂದು ಕೋಮುವಾದಿಗಳಾಗಲು ಸಾಧ್ಯವಿಲ್ಲ. ಆದರೆ ಅವರನ್ನು ದಿಕ್ಕು ತಪ್ಪಿಸುವ ತಂತ್ರ- ಕುತಂತ್ರಗಳು ನಿರಂತರವಾಗಿ ನಡೆಯುತ್ತಿವೆ. ಸೂಕ್ಷ್ಮತೆಯನ್ನು ಅರಿಯದೆ ಸಾರ್ವಜನಿಕ ಸ್ಥಳದಲ್ಲಿ ಧ್ವಜಸ್ತಂಭ ನಿರ್ಮಿಸಲು ಅನುಮತಿ ನೀಡಿದ ಪಿಡಿಒ ಅನ್ನು ಮೊದಲು ವಜಾ ಮಾಡಿ, ಬಂಧಿಸಬೇಕು ಎಂದು ಆಗ್ರಹಿಸಿದೆ.
  
ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಂಭವನೀಯ ಸೂಕ್ಷ್ಮತೆಯನ್ನು ಅರಿಯದ  ಕೆರಗೋಡು ಪೊಲೀಸ್ ಠಾಣೆಯ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕು. ರಾಷ್ಟ್ರಧ್ವಜ ಹಾರಿಸುವುದಾಗಿ ಅನುಮತಿ ಪಡೆದು ಶಾಂತಿ ಮತ್ತು ಸುವ್ಯವಸ್ಥೆ ಕದಡುವ ದುರಾಲೋಚನೆಯಿಂದ ಭಗವಾಧ್ವಜ ಹಾರಿಸಿರುವ ಸಂಸ್ಥೆಯನ್ನು ನೋಂದಣಿಯನ್ನು ರದ್ದುಗೊಳಿಸಿ, ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.
    
ಹಾಗೆಯೇ ಜಿಲ್ಲಾಡಳಿತ ತಕ್ಷಣ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಶಾಂತಿ ಮತ್ತು ಸುವ್ಯವಸ್ಥೆ ಕದಡುವ ಕಿಡಿಗೇಡಿಗಳನ್ನು ಮುಂಜಾಗ್ರತಾ ದೃಷ್ಟಿಯಿಂದ, ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

Leave a Reply