ಬೆಂಗಳೂರು: ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲಿಯೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅವರು, ಕೋವಿಡ್ ಚಿಕಿತ್ಸೆ ಮತ್ತು ನಿಯಂತ್ರಣಕ್ಕಾಗಿಯೇ ಪಿಎಂಕೇರ್ಸ್ ನಿಧಿಗೆ ಕೇಂದ್ರ ಸರ್ಕಾರ ಹಣ ಸಂಗ್ರಹಿಸಿದೆ. ಆ ನಿಧಿಯನ್ನು ಕೋವಿಡ್ ಲಸಿಕೆಯ ಉಚಿತ ವಿತರಣೆಗೆ ಬಳಸಬೇಕು ಎಂದಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೋವಿಡ್ ಲಸಿಕೆಗೆ ರೂ. 250 ಶುಲ್ಕ ನಿಗದಿಪಡಿಸಿರುವುದರಿಂದಾಗಿ ಶೇಕಡಾ 70ರಷ್ಟಿರುವ ಬಡಜನತೆ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಕೋವಿಡ್ ವಿರುದ್ಧದ ಸಮರಕ್ಕೆ ಹಿನ್ನಡೆಯಾಗಿದೆ ಎಂದಿದ್ದಾರೆ.
ಈಗಾಗಲೇ ಭಾರತ ಎರಡು ಬಗೆಯ ಕೋವಿಡ್ ಲಸಿಕೆಗಳನ್ನು ಕಂಡು ಹಿಡಿದಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ದೇಶದಲ್ಲಿ ಇಲ್ಲಿನವರೆಗೆ ಶೇಕಡ 0.5ರಷ್ಟು ಜನಸಂಖ್ಯೆಗಷ್ಟೆ ಲಸಿಕೆ ನೀಡಿರುವುದು ವಿಷಾದನೀಯ ಬೆಳವಣಿಗೆ ಎಂದಿದ್ದಾರೆ.
ಇತ್ತೀಚೆಗೆ ಕೊರೊನಾ ಸೋಂಕು ಉಲ್ಭಣಗೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ ಅನಾಹುತವಾದೀತು, ಎಚ್ಚರ ಎಂದು ಅವರು ಹೇಳಿದ್ದಾರೆ.




