ಡಿಸೆಂಬರ್ ಅಂತ್ಯಕ್ಕೆ ಯುವನಿಧಿ ನೋಂದಣಿ: ಶರಣ ಪ್ರಕಾಶ್ ಪಾಟೀಲ್

2 years ago

ಬೆಳಗಾವಿ: ಯುವನಿಧಿ ನೋಂದಣಿ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಅರಂಭಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಯುವನಿಧಿ ಅರ್ಜಿ ನೋಂದಣಿ ಡಿಸೆಂಬರ್ 21ಕ್ಕೆ ಆರಂಭವಾಗಲಿದೆ ಎಂದು ನಿನ್ನೆಯಷ್ಟೇ ಹೇಳಿದ್ದ ಅವರು, ಇಂದು ನೊಂದಣಿ ಆರಂಭವಾಗುವ ದಿನಾಂಕ ಮುಂದೂಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಅವರು, ಡಿಸೆಂಬರ್ 21ಕ್ಕೆ ಯುವನಿಧಿ ನೊಂದಣಿ ಆರಂಭವಾಗುವುದಿಲ್ಲ. ಬಹುಶಃ: ಡಿಸೆಂಬರ್ ಕೊನೆವಾರದಲ್ಲಿ ನೋಂದಣಿ ಪ್ರಕ್ರಿಯೆ ಅರಂಭವಾಗಲಿದ್ದು, ಜನವರಿಯಿಂದ ಯುವನಿಧಿ ಪ್ರಾರಂಭಿಸಲಿದ್ದೇವೆ ಎಂದರು.

ಮುಖ್ಯಮಂತ್ರಿಗಳ‌ ಜೊತೆ ಚರ್ಚೆ ಮಾಡಿ ನೋಂದಣಿ ಪ್ರಕ್ರಿಯೆ ದಿನಾಂಕವನ್ನು ಪ್ರಕಟ ಮಾಡುತ್ತೇನೆ. ಬಹುತೇಕ ಕೊನೆಯ ವಾರದಲ್ಲೇ ನೋಂದಣಿ ಪ್ರಕ್ರಿಯೆ ಆರಂಭಿಸುತ್ತೇವೆ. ಜನವರಿಯಿಂದ ಯುವ ನಿಧಿ ಹಣ ಕೊಡುತ್ತೇವೆ ಎಂದಿದ್ದಾರೆ.

ಸರ್ಕಾರದ ವಿರುದ್ಧ ಯಡಿಯೂರಪ್ಪ ಅವರ ಹೋರಾಟದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಏತಕ್ಕಾಗಿ ಯಡಿಯೂರಪ್ಪ ಅವರ ಹೋರಾಟ? ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಏನು ಮಾಡಿದರು. ಇದೆಲ್ಲವೂ ರಾಜಕೀಯ ಗಿಮಿಕ್. ಅಧಿಕಾರ ಕಳೆದುಕೊಂಡ ಮೇಲೆ ಹೋರಾಟ ಸಹಜ. ಮೊಸರಲ್ಲಿ ಕಲ್ಲು ಹುಡುಕುವುದು ಎಂದರೆ ಇದೇ. ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿದೆ ಅವರಿಗೆ( ಯಡಿಯೂರಪ್ಪ) ಪುತ್ರ ವ್ಯಾಮೋಹ ಇರಬಹುದು ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷರ ಜಾತಿ ಗಣತಿ ವಿಚಾರ ಬಂದಾಗ ಮೇಲ್ಜಾತಿಯವರೆಲ್ಲಾ ಒಂದಾಗಲಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನನಗೆ ಗೊತ್ತಿಲ್ಲ. ಕಾಂತರಾಜ್ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರದ ಅಭಿಪ್ರಾಯವೇ ನನ್ನ ಅಭಿಪ್ರಾಯ. ಸರ್ಕಾರ ಏನು ತೀರ್ಮಾನ ಮಾಡುತ್ತದೆ. ಅದಕ್ಕೂ‌ ಮುಂಚೆ ಎಲ್ಲರನ್ನೂ ಪರಿಗಣಿಸಿ, ವಿಶ್ವಾಸಕ್ಕೆ ಪಡೆದು ನಿರ್ಧಾರವಾಗುತ್ತದೆ. ಅದೇ ನಿರ್ಧಾರ ನನ್ನದು ಸಹ. ಸರ್ಕಾರ ಯಾವುದೇ ಅಭಿಪ್ರಾಯ ತೆಗೆದುಕೊಂಡರು ಅದೇ ನನ್ನ ಅಭಿಪ್ರಾಯ ಎಂದರು.

Leave a Reply