ಬೆಳಗಾವಿ: ರಾಜ್ಯದಲ್ಲೂ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ 50 ವರ್ಷದಲ್ಲಿ ಕಂಡು ಕೇಳದ ಬರಗಾಲ ಬಂದಿದ್ದು ತಕ್ಷಣವೇ ರೈತರು ಜನಸಾಮಾನ್ಯರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಬೆಳಗಾವಿಯ ಚಳಿಗಾಳದ ಅಧಿವೇಶನದಲ್ಲಿ ಮಾತಾಡಿದ ಅವರು, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ನೀಡಿದ್ದ ಕೊಡುಗೆಗಳನ್ನು ಪ್ರಸ್ತಾಪಿಸಿದರು. ಅಂದಿನ ಸರ್ಕಾರದೊಂದಿಗೆ ಇಂದಿನ ಸರ್ಕಾರವನ್ನು ಸಮೀಕರಿಸಿ ಮಾತನಾಡಿ, ಯಡಿಯೂರಪ್ಪ ನೇತೃತ್ವದ ಆಡಳಿತ ಕರ್ನಾಟಕದ ಪಾಲಿಗೆ ಸುವರ್ಣಯುಗದಂತಿತ್ತು ಎಂದರು.
ಬರದಿಂದ ತತ್ತರಿಸಿರುವ ರೈತರು ಸರ್ಕಾರದತ್ತ ಮುಖ ಮಾಡಿ ನೆರವಿಗಾಗಿ ಎದುರು ನೋಡುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣುಮುಚ್ಚಿ ಕುಳಿತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಅನುಭವಿ ನಾಯಕರಲ್ಲಿ ಒಬ್ಬರಾಗಿದ್ದು ಎಸ್ ಎಂ ಕೃಷ್ಣ ನಂತರ ಒಂದು ಪೂರ್ಣಾವಧಿಗೆ ರಾಜ್ಯವನ್ನು ನಡೆಸಿದವರು ಮತ್ತು ಇದುವರೆಗೆ ದಾಖಲೆಯ 14 ಬಜೆಟ್ ಗಳನ್ನು ಮಂಡಿಸಿರುವ ಹೆಗ್ಗಳಿಕೆಯುಳ್ಳವರಾಗಿದ್ದು ರೈತರ ಸಂಕಷ್ಟ ಅರಿಯಬೇಕಿತ್ತು. ಆದರೆ ಹೀಗಾಗಲಿಲ್ಲ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದನದಲ್ಲಿ ಬರಗಾಲ ಬಗ್ಗೆ ಚರ್ಚೆ ನಡೆಸಲು ಮುಂದಾದರೆ ಸರ್ಕಾರ ಅದಕ್ಕೆ ಸಿದ್ಧವಿದೆ ಎಂದು ಹೇಳಿದರು. ಇದನ್ನು ಸ್ವಾಗತಿಸಿ ಮಾತನಾಡಿದ ವಿಜಯೇಂದ್ರ ರೈತರು ಸಾಕಷ್ಟು ನಿರೀಕ್ಷೆಯಲ್ಲಿದ್ದು, ಅವರ ನೆರವಿನ ನಿರೀಕ್ಷೆಯನ್ನು ಹುಸಿ ಮಾಡಬೇಡಿ ಎಂದರು.
ಹಿಂದಿನ ಮುಖ್ಯಮಂತ್ರಿ ರೈತ ನಾಯಕ ಯಡಿಯೂರಪ್ಪನವರು ಉತ್ತರ ಕರ್ನಾಟಕ ಭಾಗದಲ್ಲಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಚರ್ಚೆ ಅಭಿವೃದ್ಧಿಯು ಕಾಲಮಿತಿಯಲ್ಲಿ ನಡೆಯಬೇಕು ಎನ್ನುವ ಉದ್ದೇಶ ದಿಂದ ಸುವರ್ಣ ಸೌಧವನ್ನು ನಿರ್ಮಾಣ ಮಾಡಿದ್ದಾರೆ. ಅದರ ಸದುಪಯೋಗವಾಗಬೇಕಿದೆ ಎಂದರು.
ರಾಜ್ಯದಲ್ಲಿ ಸುಮಾರು 60 ರಿಂದ 80 ಮೆಟ್ರಿಕ್ ಟನ್ ಭತ್ತ, 40 ರಿಂದ 5೦ ಮೆಟ್ರಿಕ್ ಟನ್ ಜೋಳ,10 ಲಕ್ಷ ಮೆಟ್ರಿಕ್ ಟನ್ ತೊಗರಿ, ಕಬ್ಬು,ದ್ರಾಕ್ಷಿ ಬೆಳೆಯುವ ರೈತರಿದ್ದಾರೆ. ಬರಗಾಲದಿಂದ ಸಂಪೂರ್ಣವಾಗಿ ಬೆಳೆ ನಾಶವಾಗಿದೆ. ವಿದ್ಯುತ್ ಅಭಾವದಿಂದ ಬೋರ್ ವೆಲ್ ನೀರು ಹರಿಸಲಾಗದೆ ತೊಂದರೆಗೆ ಸಿಲುಕಿದ್ದಾರೆ ಎಂದರು.
ರಾಜ್ಯದ ಜನತೆ ಹೊಸ ಸರ್ಕಾರದ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದರು. ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ, ಸಾಲ ವಸೂಲಾತಿಗೆ ತಡೆ ನೀಡಿ ಹೊಸ ಸಾಲ ನೀಡಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲವೂ ಹುಸಿಯಾಗಿದೆ ಎಂದರು.
ಬರ ಪರಿಹಾರ ವಿಷಯದಲ್ಲಿ ಕೇಂದ್ರದ ನೆರವಿಗೆ ಕಾಯದೆ ಸರ್ಕಾರ ಪರಿಹಾರ ನೀಡುವ ನಿರೀಕ್ಷೆ ನಮ್ಮದಾಗಿತ್ತು. ಆದರೆ ದುರಾದೃಷ್ಟವಶಾತ್ ಸರ್ಕಾರ ಕಣ್ಣಿದ್ದು ಕುರಡನಂತೆ , ಕಿವಿಯಿದ್ದು ಕಿವುಡನಂತೆ ವರ್ತಿಸುತ್ತಿದೆ. ಬರಗಾಲದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಪಶು ಆಹಾರದ ಬೆಲೆ ಹೆಚ್ಚಿಸಿದೆ, ಒಂದು ಕಡೆ ಸಾಲದ ಸುಳಿಗೆ ಸಿಲುಕಿ ರೈತರು ಗುಳೆ ಹೋಗುತ್ತಿದ್ದರೆ, ಸುಮಾರು 450 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಸರ್ಕಾರ ರೈತರಿಗೆ 3 ಫೇಸ್ ವಿದ್ಯುತ್ ಅನ್ನು ದಿನಕ್ಕೆ 7 ಗಂಟೆ ನೀಡಲಿದೆ ಎಂದು ಭಾವಿಸಿದ್ದೆವು. ಅದು ಹುಸಿಯಾಗಿದೆ. ರಾಜ್ಯಕ್ಕೆ ಸುಮಾರು 16 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಈಗ 10 ರಿಂದ 11 ಸಾವಿರ ಮೆಗಾ ವ್ಯಾಟ್ ಮಾತ್ರ ಉತ್ಪಾದನೆ ಆಗುತ್ತಿದೆ. ಇಂದು 4 ಸಾವಿರ ಮೆಗಾ ವ್ಯಾಟ್ ಕೊರತೆ ಇದೆ. ಇದನ್ನು ಭರಿಸಲು ಆ ರಾಜ್ಯದಿಂದ ಖರೀದಿ ಮಾಡುತ್ತೇವೆ. ಬೇರೆಬೇರೆ ರಾಜ್ಯಗಳಿಂದ ಖರೀದಿ ಮಾಡುತ್ತೇವೆ ಕಳೆದ ಮೂರು ತಿಂಗಳಿನಿಂದ ಹೇಳಲಾಗುತ್ತಿದೆ. ಆದರೆ, ಖರೀದಿ ಮಾತ್ರ ಆಗಿಲ್ಲ, ಅದಕ್ಕೆ ಕಾರಣ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದರು.
ರೈತರ ಮೇಲೆ ಕಾಳಜಿಯಿಲ್ಲದ ಸರ್ಕಾರ ಒಂದು ಕಡೆ ಬೆಲೆ ಏರಿಕೆ ಮತ್ತು ವಿದ್ಯುತ್ ಪೂರೈಕೆ ಕೊರತೆ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇಂತಹ ಸಂದರ್ಭದಲ್ಲಿ ರೈತರ ಸಹಾಯಕ್ಕೆ ಬರಬೇಕಿದ್ದ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಅಲ್ಲಿಂದ ಪರಿಹಾರ ಬಂದಿಲ್ಲ ಎಂದು ಹೇಳುತ್ತಿದೆ. ಹಾಗಾದರೆ ರಾಜ್ಯ ಸರ್ಕಾರಕ್ಕೆ ಜವಾದ್ದಾರಿ ಇಲ್ಲವೇ ಎಂದರು.
ಬರ ಪರಸ್ಥಿಯನ್ನು ಸರಿದೂಗಿಸಲು ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಬಳಸಿಕೊಳ್ಳಬಹುದಿತ್ತು. ಆದರೆ ಸರ್ಕಾರದ ಬಳಿ ರಾಜ್ಯದ ಪಾಲು ತುಂಬಲು ಹಣವಿಲ್ಲದೆ ಎಲ್ಲ ಯೋಜನೆಗಳನ್ನು ಕೈ ಬಿಟ್ಟಿದೆ. ಕೇಂದ್ರದ ಹೊಸ ನೀತಿ ಪ್ರಕಾರ ರಾಜ್ಯದ ಪಾಲು ತುಂಬಿದ ನಂತರವೇ ಕೇಂದ್ರದ ಪಾಲು ಬಿಡುಗಡೆಯಾಗುತ್ತದೆ. ಅದರಿಂದ ಆ ಯೋಜನೆಗಳನ್ನು ಸರ್ಕಾರ ಕೈ ಬಿಟ್ಟಿದೆ ಎಂದರು.
ಕಬ್ಬು ಬೆಳೆಗಾರರಿಗೆ ವಿಶೇಷ ಬೆಂಬಲ ಬೆಲೆ ಘೋಷಣೆ ಮಾಡಬೇಕು, ಒಂದು ಎಕರೆ ಕಬ್ಬು ಬೆಳೆಗೆ 25 ರಿಂದ 30 ಸಾವಿರ, ದ್ರಾಕ್ಷಿ ಬೆಳೆಗಾರರಿಗೆ 45 ರಿಂದ 50 ಸಾವಿರ ಬೆಂಬಲ ಬೆಲೆ ನೀಡಬೇಕು ಎಂದರು.




