ಬೆಂಗಳೂರು: ಪ್ರಶ್ನೋತ್ತರ ಕಲಾಪದಲ್ಲಿ ಹಿಂದುಳಿದ ವರ್ಗದ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಂದ ಸ್ವಾವಲಂಬಿ ಗಂಗಾಕಲ್ಯಾಣ ಯೋಜನೆಯಡಿ ನಿರೀಕ್ಷಿತ ಮಟ್ಟದಲ್ಲಿ ಬೋರ್ವೆಲ್ ಗಳ ಮಂಜೂರಾತಿ ಆಗುತ್ತಿಲ್ಲ ಎಂದು ಪಕ್ಷಾತೀತವಾಗಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಡಿ. ಮುನಿರಾಜು ಮತ್ತು ಚಾಮರಾಜನಗರದ ಪುಟ್ಟರಂಗಶೆಟ್ಟಿ ಅವರು ಕೇಳಿದ ಪ್ರಶ್ನೆಗಳು ವ್ಯಾಪಕ ಚರ್ಚೆಗಳಿಗೆ ಕಾರಣವಾಯಿತು.
ವಿವಿಧ ಅಭಿವೃದ್ಧಿ ನಿಗಮಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ಆದರೆ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಮೀಸಲಿಟ್ಟಿಲ್ಲ. ಹೀಗಾಗಿ ಜನರಿಗೆ ಸೌಲಭ್ಯ ಸಿಗುತ್ತಿಲ್ಲ. ಪ್ರತಿದಿನ ಅರ್ಜಿ ಹಿಡಿದು ಸಾವಿರಾರು ಮಂದಿ ನಮ್ಮ ಮನೆಬಾಗಿಲಿಗೆ ಬರುತ್ತಿದ್ದಾರೆ. ಅವರಿಗೆ ಸಮಜಾಯಿಷಿ ನೀಡುವುದೇ ಕಷ್ಟವಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿ.ಸಿ.ಪಾಟೀಲ್ ಮಾತನಾಡಿ, ವಿವಿಧ ಅಭಿವೃದ್ಧಿ ನಿಗಮಗಳಿಂದ ಸ್ವಾವಲಂಬಿ ಗಂಗಾ ಕಲ್ಯಾಣ ಯೋಜನೆಯಡಿ ಒಂದು ಅಥವಾ ಎರಡು ಬೋರ್ವೆಲ್ಗಳನ್ನು ಮಂಜೂರು ಮಾಡುತ್ತಿದ್ದಾರೆ. ಇದರಿಂದ ಫಲಾನುಭವಿಗಳ ಆಯ್ಕೆ ಕಷ್ಟವಾಗುತ್ತಿದೆ ಎಂದರು. ಶಾಸಕ ಸಿದ್ಧು ಸವದಿ ಈ ವಾದಕ್ಕೆ ದನಿಗೂಡಿಸಿದರು.
ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ ತಂಗಡಗಿ, ಈ ಹಿಂದಿನ ಸರ್ಕಾರದಲ್ಲಿ ಭಾಷಣ ಮಾಡಿದ ಕಡೆಯಲ್ಲೆಲ್ಲಾ ಜಾತಿವಾರು ಅಭಿವೃದ್ಧಿ ನಿಗಮಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಸರಿಯಾದ ಅನುದಾನ ಹಂಚಿಕೆ ಮಾಡಿಲ್ಲ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮಡಿವಾಳ, ನೇಕಾರ, ಉಪ್ಪಾರ, ಗಾಣಿಗ, ವಿಶ್ವಕರ್ಮ, ಸವಿತ ಸಮಾಜ ಸೇರಿದಂತೆ 11 ಕ್ಕೂ ಹೆಚ್ಚು ನಿಗಮಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಅನುದಾನ ನೀಡಿಲ್ಲ. ನಾವು ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿದ್ದು, ನಿಗಮಗಳನ್ನು ನೋಂದಣಿ ಮಾಡಿಸಿ ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಹಿಂದಿನ ಆರ್ಥಿಕ ವರ್ಷದಲ್ಲಿ ಲಭ್ಯವಿರುವ ಅನುದಾನದ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಫೆಬ್ರವರಿಯ ವೇಳೆಗೆ ಸ್ವಾವಲಂಬಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ಗಳನ್ನು ಕೊರೆಸಲಾಗುವುದು ಎಂದು ಭರವಸೆ ನೀಡಿದರು.




