ದೆಹಲಿ: ಒಮ್ಮೆ ಮಾತ್ರ ಬಳಸಿ ಎಸೆಯಲಾಗುವ ಪ್ಲಾಸ್ಟಿಕ್ ವಸ್ತುಗಳನ್ನು 2022ರ ಜುಲೈ 1ರಿಂದ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಒಮ್ಮೆ ಮಾತ್ರ ಬಳಸಿ ಎಸೆಯಲಾಗುವ ಪ್ಲಾಸ್ಟಿಕ್ ಲೋಟ, ತಟ್ಟೆ, ಸ್ಟ್ರಾ, ಇಯರ್ ಬಡ್ ಇತ್ಯಾದಿಗಳು ನಿಷೇಧವಾಗಲಿವೆ.
ಜೊತೆಗೆ 50 ಮೈಕ್ರಾನ್ 120 ಮೈಕ್ರಾನ್‌ಗಳಿಗೆ ಪ್ಲಾಸ್ಟಿಕ್ ಚೀಲಗಳ ದಪ್ಪ ಏರಿಸಲು ಸರಕಾರ ಮುಂದಾಗಿದೆ. ಈ ನಿಯಮ 2 ಹಂತಗಳಲ್ಲಿ ಅನುಷ್ಠಾನವಾಗಲಿದೆ. ಮೊದಲ ಹಂತದಲ್ಲಿ ಸೆ. 30ರ ಬಳಿಕ 75 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಚೀಲಗಳು ನಿಷೇಧವಾಗಲಿವೆ. 2022ರ ಡಿ. 31ರ ಬಳಿಕ 120 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಚೀಲಗಳಿಗೆ ಸಂಪೂರ್ಣ ನಿಷೇಧ ಹೇರಲಾಗುತ್ತದೆ.
ಯಾವೆಲ್ಲ ಪ್ಲಾಸ್ಟಿಕ್ ವಸ್ತುಗಳು ನಿಷೇಧವಾಗಲಿವೆ?
ಪ್ಲಾಸ್ಟಿಕ್ ಹಿಡಿಯುಳ್ಳ ಇಯರ್ ಬಡ್, ಪ್ಲಾಸ್ಟಿಕ್ ಹಿಡಿಕೆಯುಳ್ಳ ಬಲೂನ್, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್, ಐಸ್‌ಕ್ರೀಂ ಸ್ಟಿಕ್, ಅಲಂಕಾರದ ಥರ್ಮೊ ಕೋಲ್, ಪ್ಲಾಸ್ಟಿಕ್ ತಟ್ಟೆ, ಕಪ್, ಲೋಟ, ಫೋರ್ಕ್, ಚಮಚ, ಕಟ್ಲೆರಿ ವಸ್ತುಗಳು, ಸಿಹಿ ತಿಂಡಿ, ಆಮಂತ್ರಣ ಪತ್ರ, ಸಿಗರೇಟು ಪ್ಯಾಕ್ ಮೊದಲಾದ ವಸ್ತುಗಳ ಮೇಲಿನ ಪ್ಲಾಸ್ಟಿಕ್ ಕವರ್, 100 ಮೈಕ್ರಾನ್ ಗಳಿಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್, ಪಿವಿಸಿ ಬ್ಯಾನರ್ ಇತ್ಯಾದಿಗಳು.




