ಮಂಗಳೂರು: ಖಾಸಗೀ ಬಸ್ ಪ್ರಯಾಣ ದರ ಏರಿಕೆ ತಡೆ ಹಿಡಿಯಿರಿ, ಕೂಡಲೇ ಸಾರಿಗೆ ಪ್ರಾಧಿಕಾರದ ಸಭೆ ಕರೆಯಿರಿ ಎಂದು ಜಾತ್ಯತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿದವು.
ಖಾಸಗೀ ಬಸ್ ಪ್ರಯಾಣ ದರದ ವಿಪರೀತ ಏರಿಕೆ ಮಾಡಿರುವ ದ.ಕ. ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ, ದ.ಕ. ಜಿಲ್ಲೆಯ ಜಾತ್ಯಾತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ದರವನ್ನು ಇಳಿಸುವಂತೆ ಮನವಿಯನ್ನು ಸಲ್ಲಿಸಲಾಯಿತು.
ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯದೆ ಏಕಾಏಕಿ ಬಸ್ ಪ್ರಯಾಣ ದರವನ್ನು ಏರಿಸಿದ್ದು ಸರ್ವಥಾ ಸರಿಯಲ್ಲ. ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಜಿಲ್ಲೆಯ ಲಕ್ಷಾಂತರ ಜನತೆ ಉದ್ಯೋಗವಿಲ್ಲದೆ ಆರ್ಥಿಕ ಸಮಸ್ಯೆಯಿಂದ ತೀವ್ರವಾಗಿ ಕಂಗೆಟ್ಟಿರುವಾಗ ಜಿಲ್ಲಾಧಿಕಾರಿಗಳು ಕೇವಲ ನೂರಾರು ಸಂಖ್ಯೆಯಲ್ಲಿರುವ ಬಸ್ ಮಾಲೀಕರ ನೋವಿಗೆ ಸ್ಪಂದಿಸುವ ನೆಪದಲ್ಲಿ ಸಾರಿಗೆ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಯಿತು.
ಎಲ್ಲ ರಾಜಕೀಯ ಪಕ್ಷಗಳು, ಕೂಡಲೇ ಏರಿಸಿದ ದರವನ್ನು ತಡೆ ಹಿಡಿದು, ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆದು ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಲಾಯಿತು .
ನಿಯೋಗದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಸದಾಶಿವ ಉಳ್ಳಾಲ್, ಶಶಿಧರ್ ಹೆಗ್ಡೆ, ನೀರಜ್ ಪಾಲ್, CPIM ನಾಯಕರಾದ ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, CPI ಮುಖಂಡರಾದ ಕರುಣಾಕರ್, ಜಗತ್ಪಾಲ್, ಜಾತ್ಯತೀತ ಜನತಾದಳದ ಮುಖಂಡರಾದ ಸುಮತಿ ಎಸ್ ಹೆಗ್ಡೆ, ಅಲ್ತಾಫ್ ತುಂಬೆ, DYFI ನಾಯಕರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ದಲಿತ ಸಂಘಟನೆಗಳ ನಾಯಕರಾದ ಎಂ.ದೇವದಾಸ್, ರಘು ಎಕ್ಕಾರು, ತಿಮ್ಮಯ್ಯ ಕೊಂಚಾಡಿ ಉಪಸ್ಥಿತರಿದ್ದರು.



