ಬೆಂಗಳೂರು: ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಭಾರತದ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ನಾಶ ಮತ್ತು ಮನುಸ್ಮೃತಿಯ ಜಾರಿ ಎಂದರೆ ಶೇ.90 ರಷ್ಟು ಭಾರತೀಯರನ್ನು ಮತ್ತೆ ಗುಲಾಮಗಿರಿಗೆ ತಳ್ಳುವುದಾಗಿದೆ. ಇದಕ್ಕಾಗಿ ಬಹಳ ಕುತಂತ್ರಗಳು ನಡೆಯುತ್ತಿವೆ. We the people of India ಎನ್ನುವ ಮೂಲಕವೇ ನಮ್ಮ ಸಂವಿಧಾನ ತೆರೆದುಕೊಳ್ಳುತ್ತದೆ. ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡು ಪಾಲಿಸದಿದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಎಂದು ಎಚ್ಚರಿಸಿದರು.
ಸಂವಿಧಾನದ ಸಮ ಸಮಾಜ ಮತ್ತು ಜಾತ್ಯತೀತ ತತ್ವದ ಆಶಯಗಳಂತೆಯೇ ನಮ್ಮ ಸರ್ಕಾರ ಸರ್ವರ ಏಳಿಗೆಯ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಜನರ ಹಣವನ್ನು ಮತ್ತೆ ಜನರ ಬದುಕಿಗೇ ಮರಳಿಸುವುದು ನಮ್ಮ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.
ಭಾರತದಲ್ಲಿ ಬೌದ್ಧ ಧರ್ಮದ ಕಾಲದಿಂದಲೇ ಪ್ರಜಾತಂತ್ರ ವ್ಯವಸ್ಥೆ ಇತ್ತು. ಸಂವಿಧಾನ ಜಾರಿಯಾದ ಬಳಿಕ ಇಲ್ಲಿ ಪ್ರಜಾಪ್ರಭುತ್ವ ನೆಲೆಯೂರಿತು. ಶೇಕಡ 95ರಷ್ಟು ಜನರು ಗುಲಾಮರಂತೆ ಬದುಕಬೇಕು ಎಂದು ಪ್ರತಿಪಾದಿಸುವ ಮನುಸ್ಮೃತಿಯನ್ನು ಮತ್ತೆ ತರಬೇಕು ಎಂಬ ಹವಣಿಕೆಯಲ್ಲಿರುವ ಶಕ್ತಿಗಳನ್ನು ಮಣಿಸಲು ಜನರು ಸಜ್ಜಾಗಬೇಕು ಎಂದು ಕರೆ ನೀಡಿದರು.
ಸಂವಿಧಾನದ ಶಕ್ತಿ ಕುಗ್ಗದಂತೆ ಎಚ್ಚರ ವಹಿಸಬೇಕು. ದೇಶದ ಎಲ್ಲ ಜನರಿಗೂ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ದೊರಕಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರಕುತ್ತದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಅವರ ಕನಸುಗಳನ್ನು ನನಸು ಮಾಡುವುದಕ್ಕೆ ಸಂವಿಧಾನವನ್ನು ಉಳಿಸಿಕೊಳ್ಳಬೇಕು ಎಂದರು.
ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ವಿಶ್ವದ ಪ್ರಜಾಪ್ರಭುತ್ವ ದಿನಾಚರಣೆಯನ್ನು ಇಂದು ಜಗತ್ತಿನೆಲ್ಲೆಡೆ ಆಚರಿಸಲಾಗುತ್ತಿದೆ. ಈ ವರ್ಷ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ವರ್ಷಾಚರಣೆಯ ಗುರಿ ಯುವಕರ ಸಬಲೀಕರಣವಾಗಿದೆ. ಕಾಂಗ್ರೆಸ್ ಪಕ್ಷ ಸಂವಿಧಾನ ಪೀಠಿಕೆಯನ್ನು ಯುವ ಸಮುದಾಯಕ್ಕೆ ಬೋಧಿಸುವ ಮೂಲಕ ನಿರಂತರವಾಗಿ ಮುಂದುವರೆಸಿದೆ ಎಂದರು.
ಸುರಕ್ಷಿತ ಯುವ ಸಮುದಾಯ ಪ್ರಜಾಪ್ರಭುತ್ವದ ಆಸ್ತಿ. ಇದಕ್ಕೆ ನಾವು ದನಿಯಾಗಿರಬೇಕು. ಶಿಕ್ಷಣದ ಮೂಲಕ ಈ ದನಿಯನ್ನು ಸಶಕ್ತಗೊಳಿಸಬೇಕು. ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿದಿನ ಪಾಲನೆ ಮಾಡಬೇಕು. ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಗೌರವಿಸಬೇಕು. ಒಳ್ಳೆಯ ಅಂಶಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಬಿ.ಆರ್.ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಋಣಿಯಾಗಿರಬೇಕು. ಇಂಗ್ಲೆಂಡ್ನಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಭಾರತ ಪ್ರಜಾಪ್ರಭುತ್ವದ ಮೇಲೆ ಎಷ್ಟು ನಂಬಿಕೆ ಇಟ್ಟಿದೆ ಎಂಬುದನ್ನು ಬರೆಯಲಾಗಿದೆ. ಅದನ್ನು ನೋಡಿ ತಮಗೆ ಧನ್ಯತಾ ಭಾವ ಬಂತು ಎಂದು ಹೇಳಿದರು.
ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಗೃಹ ಸಚಿವ ಜಿ.ಪರಮೇಶ್ವರ್, ಮಂಕಾಳ ವೈದ್ಯ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ವಿಧಾನಪರಿಷತ್ ಸಭಾಪತಿ ಹೊರಟ್ಟಿ, ಸೇರಿ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.




