ಬೆಂಗಳೂರು: ಎಂಬಿಬಿಎಸ್ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ಸಮುದಾಯದ ಮೆರಿಟ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶೈಕ್ಷಣಿಕ ಸಾಲದ ಪ್ರಮಾಣ ಐದು ಲಕ್ಷ ರೂ.ಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ 2023-24ನೇ ಸಾಲಿನ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಕೆ ಎಂ ಡಿಸಿ ವತಿಯಿಂದ ಸರ್ಕಾರಿ ಕೋಟಾದಡಿ ಸೀಟು ಪಡೆಯುವ ಮೆರಿಟ್ ವಿದ್ಯಾರ್ಥಿಗಳಿಗೆ ಮೂರು ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಈ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಮೇರೆಗೆ ಅದನ್ನು ಐದು ಲಕ್ಷ ರೂ. ಗಳಿಗೆ ಏರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶೈಕ್ಷಣಿಕ ಸಾಲದ ಪ್ರಮಾಣವನ್ನು ಹೆಚ್ಚಳ ಮಾಡುವುದರಿಂದ ಬಡ ಕುಟುಂಬಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.
ಅದೇ ರೀತಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಬಯಸಿದರೆ ಪ್ರಸ್ತುತ 20 ಲಕ್ಷ ರೂ. ಶಿಕ್ಷಣ ಸಾಲ ನೀಡಲಾಗುತ್ತಿದ್ದು, ಇದೀಗ ಎನ್ಎಂಡಿಸಿ ನೆರವಿನೊಂದಿಗೆ ಹತ್ತು ಲಕ್ಷ ಹೆಚ್ಚುವರಿಯಾಗಿ ಒಟ್ಟು 30 ಲಕ್ಷ ರೂ.ಸಾಲ ಸೌಲಭ್ಯ ಒದಗಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.
ಕಳೆದ ಮೂರು ವರ್ಷಗಳಿಂದ ನ್ಯಾಷನಲ್ ಮೈನಾರಿಟಿ ಡೆವಲಪ್ಮೆಂಟ್ ಬೋರ್ಡ್ ನ ಯೋಜನೆಗಳನ್ನು ರಾಜ್ಯಕ್ಕೆ ಪಡೆಯುತ್ತಿರಲಿಲ್ಲ. ಇತ್ತೀಚಿಗೆ ಸಭೆ ನಡೆಸಿ ನಿರ್ದೇಶನ ನೀಡಿ ಪತ್ರ ವ್ಯವಹಾರ ನಡೆಸಿದ ನಂತರ ವಾರ್ಷಿಕ 50 ಕೋಟಿ ರೂ. ಅನುದಾನ ರಾಜ್ಯಕ್ಕೆ ಈ ವರ್ಷ ದೊರೆಯುತ್ತಿದೆ ಎಂದರು.
ನಿಗಮದ ವತಿಯಿಂದ ಇಂದು ಎಂಟು ಯೋಜನೆಗೆ ಚಾಲನೆ ನೀಡಿದ್ದು ಆ ಪೈಕಿ ಅರಿವು ಸೇರಿ ನಾಲ್ಕು ಹಳೇ ಯೋಜನೆ ಮತ್ತೆ ಆರಂಭಿಸಲಾಗಿದೆ. ನಾಲ್ಕು ಹೊಸ ಯೋಜನೆ ಪ್ರಾರಂಭಿಸಲಾಗುತ್ತಿದೆ. ನಿರುದ್ಯೋಗಿಗಳಿಗೆ ಕಾರು ಸೇರಿ ನಾಲ್ಕು ಚಕ್ರ ವಾಹನ ಖರೀದಿಗೆ 3 ಲಕ್ಷ ಸಬ್ಸಿಡಿ ನೀಡುವ ಸ್ವಾವಲಂಬಿ, ತಾಂತ್ರಿಕ ಕೌಶಲ್ಯ ತರಬೇತಿ ನೀಡುವ ಶ್ರಮಶಕ್ತಿ, ವಿಧವೆ, ವಿಚ್ಚೆಧಿತ, ಅವಿವಾಹಿತ ಮಹಿಳೆಯರಿಗೆ 50 ಸಾವಿರ ಸಾಲ ನೀಡುವ ಹಾಗೂ ವೃತ್ತಿ ಪ್ರೋತ್ಸಾಹ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದರು.
ಈ ವೇಳೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಾಶಿ, ಕೆ ಎಂ ಡಿಸಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್ ಉಪಸ್ಥಿತರಿದ್ದರು.




