ಕುಡಿಯುವ ನೀರು ಸರಬರಾಜಿಗೆ 5.14 ಕೋಟಿ ರೂ. ಬಿಡುಗಡೆ: ಪ್ರಿಯಾಂಕ್ ಖರ್ಗೆ

3 years ago

#crore #Released #drinking #water #supply #PriyankKharge

ಬೆಂಗಳೂರು: ಮುಂಗಾರು ಮಳೆ ಅಭಾವದಿಂದ ರಾಜ್ಯದ ಕೆಲವು ಕಡೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ಎದುರಿಸಲು 5.14 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸಮಸ್ಯೆ ಬಗೆಹರಿಸಲು ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ರೂಪುರೇಷೆ ಸಿದ್ಧಪಡಿಸಬೇಕು. ಇದರ ಆಧಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರದ ವತಿಯಿಂದ 5.14 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಈ ಹಿಂದೆ ಒದಗಿಸಿದ್ದ 1 ಕೋಟಿ ಹಣ ಸೇರಿದಂತೆ ಸರ್ಕಾರ ಈವರೆಗೂ ಒಟ್ಟು 6.14 ಕೋಟಿ ಹಣ ನೀಡಿದಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಸರ್ಕಾರ ಕ್ರಿಯಾ ಯೋಜನೆಯೊಂದನ್ನು ಸಿದ್ದಪಡಿಸಿದ್ದು, ಇದರಲ್ಲಿ ಒಟ್ಟು 101 ತಾಲೂಕುಗಳ 366 ಗ್ರಾಮ ಪಂಚಾಯತಿಗಳಲ್ಲಿ 514 ಹಳ್ಳಿಗಳಿಗೆ 254 ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುವುದು. ಒಟ್ಟು ರಾಜ್ಯಾದ್ಯಂತ ಟ್ಯಾಂಕರ್ ಗಳಲ್ಲಿ ಪ್ರತಿ ದಿನ 703 ಟ್ರಿಪ್ಗಳ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವುದು. ಜೊತೆಗೆ 465 ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರನ್ನು ಜನರಿಗೆ ಸರಬರಾಜು ಮಾಡಲೂ ಹಣ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟು ಟ್ಯಾಂಕರ್ ನೀರು ಪೂರೈಕೆಗೆ 4.21 ಕೋಟಿ ಹಣವನ್ನು ನೀಡಲಾಗಿದ್ದು, ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆ ಪಡೆಯಲು 93 ಲಕ್ಷ ಹಣವನ್ನ ನೀಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುನ್ನಚ್ಚರಿಕೆಯಿಂದ ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply