ಸಬ್ ಇನ್ಸ್ ಪೆಕ್ಟರ್ ಹುದ್ದೆ ಕೊರತೆ ನೀಗಿಸುವ ದೃಷ್ಟಿಯಿಂದ ಪಿಎಸ್ಐ ನೇಮಕಾತಿ ಅಗತ್ಯ: ಡಾ.ಜಿ.ಪರಮೇಶ್ವರ್

3 years ago

#Recruitment #PSI #necessary #subinspector #posts #GParameshwar

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆ ಕೊರತೆಯಿದೆ. ಇದನ್ನು ನೀಗಿಸುವ ದೃಷ್ಟಿಯಿಂದ ಪಿಎಸ್ಐ ನೇಮಕಾತಿ ಅಗತ್ಯವಿದೆ ಎಂದು ಹೇಳಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ಕೋರ್ಟ್ ಅಭಿಪ್ರಾಯ ಪಡೆದು ಸದ್ಯದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿಯ ಹಗರಣದ ತನಿಖೆ ಮುಂದುವರೆದಿದೆ. ಇದು ಒಂದು ಭಾಗ. ಮತ್ತೊಂದು ಭಾಗದಲ್ಲಿ ರಾಜ್ಯಕ್ಕೆ ಕೊರತೆ ಇರುವ ಪಿಎಸ್ಐಗಳ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿದೆ ತಿಳಿಸಿದರು.

545 ಪಿಎಸ್ಐಗಳ ನೇಮಕಾತಿಗೆ ಆಗಿನ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ ದೊಡ್ಡ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ತನಿಖೆ ನಡೆದಿದೆ. ಈ ಹಗರಣದ ಬಳಿಕ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರ ಹೈಕೋರ್ಟ್ನ ಆದೇಶವನ್ನು ನಿರೀಕ್ಷೆ ಮಾಡುತ್ತಿತ್ತು. ಆದರೆ ನ್ಯಾಯಾಲಯ ಸರ್ಕಾರಕ್ಕೆ ಅಭಿಪ್ರಾಯ ನೀಡುವಂತೆ ಸೂಚನೆ ನೀಡಿದೆ ಎಂದರು.

ಈ ಹಿನ್ನೆಲೆಯಲ್ಲಿ ನಾವೆಲ್ಲ ಚರ್ಚೆ ಮಾಡಿದ್ದೇವೆ. ಸರ್ಕಾರದ ನಿಲುವನ್ನು ಅಡ್ವೋಕೇಟ್ ಜನರಲ್ ಅವರು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಅಲ್ಲಿಂದ ನಿರ್ದೇಶನಗೊಂಡ ಬಳಿಕ 545 ಮತ್ತು 400 ಪಿಎಸ್ಐಗಳ ನೇಮಕಾತಿಗೆ ತ್ವರಿತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಮೈಸೂರಿನ ಟಿ.ನರಸೀಪುರದಲ್ಲಿ ಯುವಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾವುದೇ ರಾಜಕೀಯ ಪ್ರಭಾವಕ್ಕೆ ಮಣಿಯುವುದಿಲ್ಲ. ಈಗಾಗಲೇ ತನಿಖೆ ನಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಈ ಹಂತದಲ್ಲಿ ಪ್ರಭಾವ ಬಳಕೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಹೇಳಿದರು.

Leave a Reply