ಅಪಹರಿಸಿ, ಹಣ ಸುಲಿಗೆ ಮಾಡಿದ್ದ ಇಬ್ಬರ ಬಂಧನ

3 years ago

#Arrest #kidnapped #extorted #money

ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ವಕೀಲರೊಬ್ಬರನ್ನು ಅಡ್ಡಗಟ್ಟಿ ಅಪಹರಿಸಿ, ಹಣ ಸುಲಿಗೆ ಮಾಡಿದ್ದ ಐವರು ಖದೀಮರ ಪೈಕಿ ಇಬ್ಬರು ಅಪಹರಣಕಾರರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಹಾಸನದ ಶಾಂತಿ ಗ್ರಾಮದ ವಕೀಲ ಅಶೋಕ್ ರನ್ನು ಅಪಹರಿಸಿದ ಆರೋಪಿಗಳಾದ ಯಶವಂತ್ ಹಾಗೂ ನಂದೀಶ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ‌. ನಾಗೇಂದ್ರ ಬ್ಲಾಕ್ನಲ್ಲಿ ವಾಸವಾಗಿದ್ದ ಅಶೋಕ್, ಕಳೆದ ಜೂ.19 ರಂದು ಊರಿಗೆ ಹೋಗಿ ಹನುಮಂತ ನಗರದ ಪಿಇಎಸ್ ಕಾಲೇಜು ಬಳಿ‌ ಮನೆಗೆ ನಡೆದುಕೊಂಡು ಬರುತ್ತಿದ್ದರು.‌

ಈ ವೇಳೆ‌ ಆಟೋದಲ್ಲಿ ಬಂದ ಅಪಹರಣಕಾರರ ಗುಂಪಿನಲ್ಲಿ ಓರ್ವ  ಅಶೋಕ್‌ ಅವರನ್ನು ತಡೆದು ಕತ್ತರಿಗುಪ್ಪೆಗೆ ಹೇಗೆ ಹೋಗಬೇಕು ಎಂದು ವಿಳಾಸ ಕೇಳಿದ್ದಾನೆ.‌ ದಾರಿ ತೋರಿಸಲು ಹೋದ ಅವರನ್ನು ಆಟೋದಲ್ಲಿ ಕೂರಿಸಿ ಆರೋಪಿಗಳು ಅಪಹರಿಸಿದ್ದಾರೆ. ನೈಸ್ ರಸ್ತೆಯ ಹಲವೆಡೆ ಸುತ್ತಾಡಿಸಿ ಹಣ ನೀಡುವಂತೆ‌ ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾರೆ.‌ ಅಶೋಕ್ ಬಳಿ ಹಣವಿಲ್ಲದಿರುವುದನ್ನು ಗಮನಿಸಿದ ಆರೋಪಿಗಳು ಸಹದ್ಯೋಗಿಗಳಿಗೆ ಕರೆ ಮಾಡಿಸಿ ತಮಗೆ ಅಪಘಾತವಾಗಿದ್ದು, ತುರ್ತು ಹಣದ ಅಗತ್ಯವಿದೆ ಎಂದು ಹೇಳಿಸಿ ಆನ್ಲೈನ್ ಮೂಲಕ 20 ಸಾವಿರ ಹಣ ಹಾಕಿಸಿಕೊಂಡಿದ್ದಾರೆ. ಬಳಿಕ ಎಟಿಎಂ ಮೂಲಕ ಹಣ ಬಿಡಿಸಿಕೊಂಡು ಪೊಲೀಸರಿಗೆ ಹೇಳಿದರೆ ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿ ಕನಕಪುರದ ‌ರವಿಶಂಕರ್ ಗುರೂಜಿ ಆಶ್ರಮದ ಬಳಿ ಬಿಟ್ಟು ಆರೋಪಿಗಳು‌ ಪರಾರಿಯಾಗಿದ್ದರು.

ಅಪಹರಣ ಸಂಬಂಧ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಕಾರ್ಯಾಚರಣೆ ಕೈಗೊಂಡು ಇಬ್ಬರು‌ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Leave a Reply