ಐಟಿ-ಬಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಅಮೆರಿಕದ ಉಪ ರಾಯಭಾರಿ ಕಚೇರಿ

3 years ago

ಬೆಂಗಳೂರು: ಐಟಿ-ಬಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಅಮೆರಿಕದ ಉಪ ರಾಯಭಾರಿ ಕಚೇರಿ ತೆರೆಯಲು ಮುಂದಾಗಿರುವುದು ದೇಶದ ಹಿತದೃಷ್ಟಿಯಿಂದ ಭವಿಷ್ಯದಲ್ಲಿ ಹೆಚ್ಚಿನ ಲಾಭವಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಉಪ ರಾಯಭಾರಿ ಕಚೇರಿ ತೆರೆಯಬೇಕೆಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ತೆರಳಿದ ವೇಳೆ ಅಲ್ಲಿನ ಅಧ್ಯಕ್ಷರಾದ ಜೋ ಬಿಡೆನ್ ಅವರು ಬೆಂಗಳೂರು ಮತ್ತು ಅಹಮದಾಬಾದ್‍ನಲ್ಲಿ ಉಪ ರಾಯಭಾರಿ ಕಚೇರಿ ತೆರೆಯಲು ಒಪ್ಪಿಗೆ ಸೂಚಿಸಿದ್ದಾರೆ. ಅದರಲ್ಲೂ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಪ್ರಾರಂಭಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಶಂಸಿಸಿದರು.

ಈ ಮೊದಲು ವೀಸಾ ಪಡೆಯಲು ಚೆನ್ನೈ ಇಲ್ಲವೆ ದೆಹಲಿಗೆ ತೆರಳಬೇಕಿತ್ತು. ಇದರಿಂದ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನಾನುಕೂಲವಾಗುತ್ತಿತ್ತು. ಇದನ್ನು ಮನಗಂಡು ಈ ಹಿಂದೆಯೇ ನಾವು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜಯಶಂಕರ್ ಅವರಿಗೆ ಬೆಂಗಳೂರಿನಲ್ಲಿ ಉಪ ರಾಯಭಾರಿ ಕಚೇರಿ ತೆರೆಯಲು ಮನವಿ ಮಾಡಿದ್ದೇವೆ ಎಂದರು.

ಬೆಂಗಳೂರು ಇಂದು ಜಾಗತಿಕ ನಗರವಾಗಿ ಗುರುತಿಸಿಕೊಂಡಿದೆ. ಪ್ರತಿದಿನ ಇಲ್ಲಿಂದ ವಿಶ್ವದ ನಾನಾ ರಾಷ್ಟ್ರಗಳಿಗೆ ಅನೇಕ ಜನ ತೆರಳುತ್ತಾರೆ. ಈಗ ಉಪರಾಯಭಾರಿ ಕಚೇರಿ ತೆರೆಯುತ್ತಿರುವುದರಿಂದ ದಕ್ಷಿಣ ಭಾರತಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ರಾಯಭಾರಿ ಕಚೇರಿ ಪ್ರಾರಂಭವಾದಾಗ ಬೆಂಗಳೂರಿನಲ್ಲಿ ತೆರೆಯಬೇಕೆಂಬುದು ಒತ್ತಾಸೆಯಾಗಿತ್ತು. ಕೇಂದ್ರ ಸಚಿವರನ್ನು 2020ರಲ್ಲಿ ಭೇಟಿ ಮಾಡಿದ ವೇಳೆ ಅಮೆರಿಕದ ಸಿಯಾಟಲ್‍ನಲ್ಲಿ ಕಚೇರಿ ತೆರೆಯುವ ಹಂತದಲ್ಲಿದೆ. ಪರಸ್ಪರ ಒಪ್ಪಂದದಡಿ ಬೆಂಗಳೂರಿನಲ್ಲಿ ಆರಂಭಿಸುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಂಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

Leave a Reply