ಭಾವನಾತ್ಮಕ ಸನ್ನಿವೇಶಕ್ಕೆ ಮಂಡ್ಯ ನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿ

3 years ago

ಮಂಡ್ಯ: ಪೊಲೀಸ್ ಇಲಾಖೆಯಲ್ಲಿ ಒಂದೇ ಕುಟುಂಬದ ಹಲವರು ಕರ್ತವ್ಯ ನಿರ್ವಹಿಸುವುದನ್ನು ನೋಡಿದ್ದೇವೆ. ಆದರೆ, ಪೊಲೀಸ್ ಅಧಿಕಾರಿಯಾಗಿರುವ ಸ್ವತಃ ತಂದೆಯಿಂದಲೇ ಎಸ್‍ಐ ಆಗಿ ಅಧಿಕಾರ ಸ್ವೀಕರಿಸುವ ಅವಕಾಶ ಕೆಲವೇ ಕೆಲವು ಮಕ್ಕಳಿಗೆ ಲಭ್ಯವಾಗುತ್ತದೆ. ಅಂತಹ ಒಂದು ಭಾವನಾತ್ಮಕ ಸನ್ನಿವೇಶಕ್ಕೆ ಮಂಡ್ಯ ನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.

ಒಂದು ಕಡೆ ತಂದೆ ಬಿ.ಎಸ್.ವೆಂಕಟೇಶ್ ವರ್ಗಾವಣೆಯಾಗಿದ್ದರೆ ಅದೇ ಹುದ್ದೆಗೆ ಮಗಳು ಬಿ.ವಿ.ವರ್ಷಾ ನಿಯೋಜನೆಗೊಂಡಿದ್ದರು. ಇದು ಆಶ್ಚರ್ಯವಾದರೂ ವಾಸ್ತವವಾಗಿತ್ತು. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಸ್‍ಐ ಆಗಿದ್ದ ಬಿ.ಎಸ್.ವೆಂಕಟೇಶ್ ಎಸ್‍ಪಿ ಕಚೇರಿಗೆ ವರ್ಗಾವಣೆಯಾದರೆ, ಅದೇ ಹುದ್ದೆಗೆ ಮಗಳಾದ ನೂತನ ಎಸ್‍ಐ ಬಿ.ವಿ.ವರ್ಷಾ ಅವರನ್ನು ಸರ್ಕಾರ ನಿಯೋಜನೆ ಮಾಡಿತು. ಜೂ.20ರಂದು ತಂದೆ ಬಿ.ಎಸ್.ವೆಂಕಟೇಶ್, ತಮ್ಮ ಮಗಳು ಬಿ.ವಿ.ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಅಪ್ಪ-ಮಗಳ ಕಣ್ಣಂಚಿನಲ್ಲಿ ನೀರಾಡಿದವು. ಇಡೀ ಠಾಣೆಯ ಸಿಬ್ಬಂದಿಗಳು ಈ ಭಾವನಾತ್ಮಕ ಸನ್ನಿವೇಶವನ್ನು ಕಣ್ತುಂಬಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು.

ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ವರ್ಷಾ ಅವರು 2022ರ ಬ್ಯಾಚ್‍ನ ಪಿಎಸ್‍ಐ ಆಗಿದ್ದಾರೆ. ಇವರು ಗುಲ್ಬರ್ಗಾದಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ ಒಂದು ವರ್ಷ ಪ್ರೋಬೆಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಅವರ ಮೊದಲ ಪೋಸ್ಟಿಂಗ್ ಕೂಡ ಮಂಡ್ಯದಲ್ಲೇ ಆಗಿದ್ದು, ತಂದೆಯಿಂದಲೇ ಅಧಿಕಾರ ಪಡೆದು ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನ ಆರಂಭಿಸಿದ್ದಾರೆ.

ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಪಿಎಸ್‍ಐ ಆಗಿ ತಮ್ಮ ತಂದೆಯವರಿಂದ ಅಧಿಕಾರ ಸ್ವೀಕರಿಸಿದ ಪಿಎಸ್‍ಐ ಬಿ.ವಿ. ವರ್ಷಾ ಅವರಿಗೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದಾರೆ.

ಪಿಎಸ್‍ಐ ಬಿ.ವಿ.ವರ್ಷಾ ಅವರಿಗೆ ತಂದೆಯಿಂದಲೇ ಅಧಿಕಾರ ಪಡೆಯುವ ಅದೃಷ್ಟ ನಿಮ್ಮದಾಗಿದೆ. ಇದು ಕೆಲವರಿಗೆ ಮಾತ್ರ ಸಿಗುವ ಅಪರೂಪದ ಅವಕಾಶ. ತಾವು ಮಂಡ್ಯ ಜಿಲ್ಲೆಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಶುಭ ಹಾರೈಸಿದರು.

ತಮ್ಮ ತಂದೆಯವರಾದ ಪಿಎಸ್‍ಐ ಬಿ.ಎಸ್. ವೆಂಕಟೇಶ್ ಅವರು 16 ವರ್ಷಗಳ ಕಾಲ ಸೇನೆಯಲ್ಲಿ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿ ನಂತರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಉತ್ತಮ ಸೇವೆ ನೀಡುವಂತೆ ತಿಳಿಸಿದರು.

Leave a Reply