ಬಿಜೆಪಿ ವರ್ಸಸ್ ಲಿಂಗಾಯತರು
ಒಂದು ಪುಟ್ಟ ಕ್ರೋನಾಲಜಿ
- ವಯಸ್ಸಿನ ನೆಪ ಹೇಳಿ, ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದರು. (ಯಡಿಯೂರಪ್ಪನವರಿಗೆ ಅಷ್ಟೆಲ್ಲ ವಯಸ್ಸಾಗಿದ್ದರೆ, ಈಗ ಚುನಾವಣೆಯಲ್ಲಿ ಯಾಕೆ ಪಾಪ ಅವರನ್ನು ರಾಜ್ಯ ಸುತ್ತಿಸಿ, ಹೈರಾಣು ಮಾಡುತ್ತಿರೋದು)
- ಬೊಮ್ಮಾಯಿಯವರಿಗೆ ಸಿಎಂ ಪಟ್ಟ ಕಟ್ಟಿದರೂ, ಸ್ವಂತ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಸ್ವತಂತ್ರವಿಲ್ಲದ ಡಮ್ಮಿ ಸಿಎಂ ಮಾಡಲಾಯ್ತು. ತೆರೆಮರೆಯಲ್ಲಿ ಸಂಘಪರಿವಾರದ ಮೂಲದ ರಾಜಕಾರಣಿಗಳು ನಡೆಸಿದ ಭ್ರಷ್ಟಾಚಾರದ ಅಪಖ್ಯಾತಿ ಬೊಮ್ಮಾಯಿಯವರನ್ನು ಸುತ್ತಿಕೊಂಡಿತು. (ಬೊಮ್ಮಾಯಿ ಆರ್‌ಎಸ್‌ಎಸ್ ಹಿನ್ನೆಲೆಯವರಲ್ಲ)
- ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಎಂಎಲ್‌ಸಿ ಆಗುವ ಅವಕಾಶಕ್ಕೆ ಕೊನೇ ಕ್ಷಣದಲ್ಲಿ ಅಡ್ಡಗಾಲು ಹಾಕಿ, ಅವರು ಮಂತ್ರಿಯಾಗದಂತೆ ನೋಡಿಕೊಳ್ಳಲಾಯಿತು.
- ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರದಿಂದ ಇನ್ಮುಂದೆ ತಮ್ಮ ಮಗ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಯಡಿಯೂರಪ್ಪನವರು ಘೋಷಿಸಿದ ಕೂಡಲೇ ಅವರ ಮೇಲೆ ಒತ್ತಡ ತಂದು, ಮಾರನೇ ದಿನವೇ ಅವರು “ಟಿಕೇಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾನು ನನ್ನ ಮನದಿಂಗಿತ ಹೇಳಿಕೊಂಡಿದ್ದೆ ಅಷ್ಟೆ” ಎಂದು ಸಮಜಾಯಿಷಿ ಕೊಡುವಂತೆ ಮಾಡಿದರು.
- ಟಿಕೇಟು ಹಂಚಿಕೆಯಲ್ಲಿ ಯಡಿಯೂರಪ್ಪನವರ ಮಾತಿಗೆ ಕಿಮ್ಮತ್ತು ಕೊಡಲಿಲ್ಲ. ಹಾಗಾಗಿ ಬೇಸತ್ತ ಅವರು, ಸಭೆಯ ಮಧ್ಯದಲ್ಲೇ ದಿಲ್ಲಿಯಿಂದ ಕರ್ನಾಟಕಕ್ಕೆ ವಾಪಾಸು ಬರುವಂತೆ ಮಾಡಿದರು.
- ಲಿಂಗಾಯತ ಸಮುದಾಯದ ಮತ್ತೋರ್ವ ಹಿರಿಯ ನಾಯಕ ಜಗದೀಶ್ ಶೆಟ್ಟರ್‌ರನ್ನಂತೂ ತುಂಬಾ ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಟಿಕೇಟನ್ನೇ ನಿರಾಕರಿಸಿ, ರಾಜಕೀಯ ನಿವೃತ್ತಿ ಘೋಷಿಸುವಂತೆ ಒತ್ತಡ ತಂದರು. ತಮ್ಮ ಕೊನೆಯ ದಿನಗಳಲ್ಲಿ ಅವರು ಕಾಂಗ್ರೆಸ್ ಬಾಗಿಲು ತಟ್ಟುವಂತೆ ಮಾಡಿ, ನಗೆಪಾಟಲಿಗೆ ದೂಡಿದರು.
- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ, ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರವನ್ನು ತರುವಲ್ಲಿ ಪ್ರಧಾನ ಭೂಮಿಕೆ ನಿಭಾಯಿಸಿದ್ದ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿಯವರಿಗೂ ಇದೇ ಗತಿ ಎದುರಾಯ್ತು.
- ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿದ್ದ ಬೆಳಗಾವಿಯ ಪತ್ರಿಕಾಗೋಷ್ಠಿಯಲ್ಲಿ ಸಿಟಿ ರವಿಯವರು, ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಬಿಜೆಪಿ ಪಕ್ಷವೆಂದರೆ ಯಾರದೋ ಮನೆಯ ಕಿಚನ್ ಕೋಣೆಯಲ್ಲ ಎಂದು ಲೇವಡಿ ಮಾಡಿದ್ದರು.
- ಲಿಂಗಾಯತ ಸಮುದಾಯದ ನಾಯಕರುಗಳ ನಡುವೆಯೇ ಒಳಜಗಳ ತಂದು ಪರಸ್ಪರ ಕಚ್ಚಾಡುವಂತೆ ಮಾಡಿದರು. ಹಾಗಾಗಿ ವಿ.ಸೋಮಣ್ಣ, ಯಡಿಯೂರಪ್ಪನವರ ವಿರುದ್ಧ ಹರಿಹಾದರು. ಕೊನೆಗೆ, ಅದೇ ವಿ ಸೋಮಣ್ಣನವರನ್ನು ಅವರಿಗೆ ಸಮ್ಮತಿಯಿಲ್ಲದಿದ್ದರೂ, ವರುಣಾದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಕಣಕ್ಕಿಳಿಸಿ, ಸೋಮಣ್ಣನವರ ರಾಜಕೀಯ ಜೀವನಕ್ಕೂ ಮಂಗಳ ಹಾಡಲು ಮುಂದಾದರು. ಅದಕ್ಕು ಮೊದಲು ವಿಜಯೇಂದ್ರರನ್ನು ವರುಣಾದಲ್ಲಿ ಕಣಕ್ಕಿಳಿಸಿ ಅವರ ರಾಜಕೀಯ ಜೀವನ ಬಲಿಕೊಡಲು ನೋಡಿದರು. ಆದರೆ ಯಡಿಯೂರಪ್ಪನವರು ಹಠ ಹಿಡಿದಿದ್ದರಿಂದ ವಿಜಯೇಂದ್ರ ಬಚಾವಾದರು.
- ಶೆಟ್ಟರ್ ಮತ್ತು ಸವದಿಯವರನ್ನು ಸೋಲಿಸುವ ಹೊಣೆಯನ್ನು ಈಗ ಯಡಿಯೂರಪ್ಪನವರ ಹೆಗಲಿಗೇರಿಸಿ, ಲಿಂಗಾಯತ ಸಮುದಾಯದ ನಡುವಿನ ಒಗ್ಗಟ್ಟಿನ ಬಿರುಕನ್ನು ಮತ್ತಷ್ಟು ದೊಡ್ಡದು ಮಾಡಲು ಮುಂದಾಗಿದ್ದಾರೆ.
- ಇದೀಗ ಲಿಂಗಾಯತ ಸಮುದಾಯದ ಬಗ್ಗೆ ಬಿ.ಎಲ್.ಸಂತೋಷ್ ಅವಹೇಳನಕಾರಿಯಾಗಿ ಮಾತಾಡಿದ ಸುದ್ದಿ ಕೇಳಿಬರುತ್ತಿದೆ.
ಇಷ್ಟಾದರೂ ಲಿಂಗಾಯತ ಸಮುದಾಯ ಎಚ್ಚೆತ್ತಕೊಳ್ಳದಿದ್ದರೆ, ಅಣ್ಣ ಬಸವಣ್ಣ ಕೂಡಾ ಈ ತಪ್ಪನ್ನು ಕ್ಷಮಿಸಲಾರರು…
- ಮಾಚಯ್ಯ ಎಂ ಹಿಪ್ಪರಗಿ




