ಬೆಂಗಳೂರು: ವಿಧಾನಸಭಾ ಚುನಾವಣೆಯ ಪ್ರಚಾರದ ಅಬ್ಬರ ತಾರಕಕ್ಕೇರಿರುವ ಸಂದರ್ಭದಲ್ಲೇ ಕೆಜಿಎಫ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕಿಯ ಕುಟುಂಬಕ್ಕೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು ಕೋಲಾಹಲ ಸೃಷ್ಟಿಸಿದೆ.
ಈ ಆಡಿಯೋದಲ್ಲಿ ಶಾಸಕಿಯ ಪತಿ ಮಾತನಾಡಿದ್ದಾರೆ ಎನ್ನಲಾಗಿದ್ದು ಅದರಲ್ಲಿ ಸಂಸಾರ ಉಳಿಸಿಕೊಳ್ಳಲು ಅಂಗಲಾಚುವ ವಿಚಾರ ಉಲ್ಲೇಖವಾಗಿದೆ. ಆದರೆ ಮೇಲ್ನೋಟಕ್ಕೆ ಇದು ನಕಲಿ ಆಡಿಯೋ ಎಂದೇ ತೋರುತ್ತಿದೆ. ಆಡಿಯೋದಲ್ಲಿ ಕೋಲಾರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬ್ಯಾಲಹಳ್ಳಿ ಗೋವಿಂದೇಗೌಡ ಜತೆ ಕೆಜಿಎಫ್ ಕಾಂಗ್ರೆಸ್ ಅಭ್ಯರ್ಥಿಗೆ ಸಂಬಂಧ ಕಲ್ಪಿಸಲಾಗಿದ್ದು ಈ ಬಗ್ಗೆ ದೂರು ದಾಖಲಾಗಿದೆ.
ಈ ಆಡಿಯೋದಲ್ಲಿ “2018ರಲ್ಲಿ ನನ್ನ ಮನೆ ಬಾಗಿಲಿಗೆ ಬಂದು ನನ್ನ ಕನ್ನಿನ್ಸ್ ಮಾಡಿ ಅವಳನ್ನು ಕರೆದುಕೊಂಡು ಹೋದಿರಿ. ಬಾಲಹಳ್ಳಿ, ಗೋವಿಂದೇಗೌಡನ ಜೊತೆ ಸೇರಿಕೊಂಡು ಮಕ್ಕಳನ್ನು ಮಡಿಕೇರಿಗೆ ಹಾಕಿದ್ದಾಳೆ. ಗೋವಿಂದೇಗೌಡರ ವಿಚಾರ ಎತ್ತಿದರೆ ಸಾಕು ಊಟಕೆ ವಿಷ ಹಾಕಿ ಸಾಯಿಸಿಬಿಡ್ತೀನಿ ಅಂತಾರೆ. ನಿಮ್ಮನ್ನ ಕೈ ಮುಗಿತೀನಿ ರೆಡ್ಡಿಯವರೇ ಅವಳನ್ನು ಸೋಲಿಸಿ ಮನೆಗೆ ಕಳುಹಿಸಿಬಿಡಿ. ನಾನು ಹೆಂಗೋ ನನ್ನ ಸಂಸಾರ ಉಳಿಸಿಕೊಳ್ತೀನಿ” ಎಂಬ ಸಂಭಾಷಣೆ ಕೇಳಿಬಂದಿದೆ.
ಈ ಬಗ್ಗೆ ಕೆಜಿಎಫ್ ನ ಅಭ್ಯರ್ಥಿಯ ಪತಿ ಬೆಂಗಳೂರಿನ ವಿಧಾನಸೌಧ ಪಠಾಣೆಗೆ ದೂರು ನೀಡಿದ್ದು ಐಪಿಸಿ 120ಬಿ, 171ಜಿ,465, ಹಾಗೂ 469 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.




