CRPF ಪರೀಕ್ಷೆ: ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲಾಗಿದೆ: ಟಿ.ಎ.ನಾರಾಯಣ ಗೌಡ

3 years ago

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಹದಿಮೂರು ಭಾರತೀಯ ನುಡಿಗಳಲ್ಲಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದ್ದು, ತಡವಾಗಿಯಾದರೂ ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ.

ಆಯಾ ರಾಜ್ಯಗಳ ಅಭ್ಯರ್ಥಿಗಳು ಆಯಾ ರಾಜ್ಯದಲ್ಲಿ ಮೀಸಲು ಪೊಲೀಸ್ ಪಡೆಗೆ ನೇಮಕಾತಿ ಆಗಲು ಕೇಂದ್ರ ಸರ್ಕಾರದ ಈ ನಿರ್ಧಾರ ಅನುಕೂಲ ಕಲ್ಪಿಸಿದೆ. ಹಿಂದಿ ಮತ್ತು ಇಂಗ್ಲಿಷ್ ಗಳಲ್ಲಿ ಮಾತ್ರ ನಡೆಯುತ್ತಿದ್ದ ಪರೀಕ್ಷೆ ಇನ್ನು ಮುಂದೆ ಕನ್ನಡದಲ್ಲೂ ನಡೆಯುತ್ತದೆ ಎಂಬುದು ಸಮಾಧಾನದ ಸಂಗತಿ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮಾತ್ರವಲ್ಲ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಗೆ ನಡೆಸುವ ಎಲ್ಲ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯುವಂತಾಗಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ಭಾಷಾ ತಾರತಮ್ಯವನ್ನು ಕೊನೆಗಾಣಿಸಬೇಕು.

ಹಿಂದಿ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳೂ ಸಮಾನವಾದವು. ಎಲ್ಲ ಭಾಷಾ ಸಮುದಾಯಗಳಿಗೂ ಒಂದೇ ರೀತಿಯ ಹಕ್ಕುಗಳಿರಬೇಕು. ಭಾರತ ಒಕ್ಕೂಟದಲ್ಲಿ ಹಿಂದಿಗೆ ಮಾತ್ರ ಹೆಚ್ಚುಗಾರಿಕೆ ನೀಡಿರುವುದರಿಂದ ಇತರ ಭಾರತೀಯ ನುಡಿಗಳನ್ನು ಆಡುವ ಜನರ ಹಕ್ಕುಗಳನ್ನು ಕಸಿಯಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ.

ಕೇಂದ್ರ ಸರ್ಕಾರದ ಇಲಾಖೆಗಳು, ರೈಲ್ವೆ, ಬ್ಯಾಂಕ್, ಯುಪಿಎಸ್ ಸಿ ಇತ್ಯಾದಿಗಳಲ್ಲಿ ಕನ್ನಡ ಪರೀಕ್ಷೆ ನಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸತತ ಇಪ್ಪತ್ತೈದು ವರ್ಷಗಳಿಂದ ಚಳವಳಿ ಸಂಘಟಿಸುತ್ತ ಬಂದಿದೆ. ಎಲ್ಲ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯುವಂತಾಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ.

  • ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ,
    ಕರ್ನಾಟಕ ರಕ್ಷಣಾ ವೇದಿಕೆ

Leave a Reply