ಚಾಮರಾಜನಗರ : ರಾಷ್ಟ್ರದ ಅಭಿವೃದ್ಧಿಗೆ ಯುವಕರಿಗೆ ಕೌಶಲ್ಯ ತರಬೇತಿ ಬಹಳ ಮುಖ್ಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್ ಅನಿತಾ ಹೇಳಿದರು.
ಭಾರತ ಸರ್ಕಾರದ ನೆಹರು ಯುವ ಕೇಂದ್ರ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಜಿಲ್ಲಾ ಉದ್ಯೋಗ ಇಲಾಖೆ ರಂಗವಾಹಿನಿ ( ರಿ) ಇವರ ಸಂಯುಕ್ತ ಆಶ್ರಯದಲ್ಲಿ ಮರಿಯಾಲ ತಾಲೂಕಿನ ಜೆ ಎಸ್ ಎಸ್ ಐಟಿಐ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಜನರಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನರು ರಾಷ್ಟ್ರದ ಬೆನ್ನೆಲುಬು. ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಹಾಗೂ ವೃತ್ತಿಪರ ಕೋರ್ಸ್ ಗಳಲ್ಲಿ ಸಾಕಷ್ಟು ಅವಕಾಶಗಳಿದ್ದು ನಿತ್ಯ ಪತ್ರಿಕೆಗಳನ್ನು ಓದುವ ಮೂಲಕ ಹೆಚ್ಚಿನ ವಿಷಯ ಅರಿಯಬೇಕು ಜೀವನದಲ್ಲಿ ಪರಿಪೂರ್ಣತೆಯನ್ನು ಪಡೆಯಲು ಶಾಲಾ ಹಂತದಲ್ಲಿ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಉದ್ಯೋಗ ಇಲಾಖೆಯ ಸಮಾಲೋಚಕರಾದ ವಿನೋದ್ ಕುಮಾರ್ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ಶಿಕ್ಷಣದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಮಾಲೋಚನೆ ಮತ್ತು ಮಾರ್ಗದರ್ಶನ ಅಗತ್ಯವು ವಿಮರ್ಶಾತ್ಮಕವಾಗಿ ಮುಖ್ಯವಾಗಿದೆ. ಅಭ್ಯರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಔದ್ಯೋಗಿಕ ಮಾಹಿತಿ ನೀಡಲು ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಸಂಶೋಧಕ ಮನೋಜ್ ಯುವಜನರು ಮತ್ತು ಹೊಸ ತಂತ್ರಜ್ಞಾನದಲ್ಲಿ ಉದ್ಯೋಗಾವಕಾಶಗಳು ಮತ್ತು ಉದ್ಯಮಶೀಲತೆ ಬಗ್ಗೆ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ ಸಿಎಂ ನರಸಿಂಹಮೂರ್ತಿ ಕಲೆಯು ಒಂದು ವೃತ್ತಿ – ಹೇಗೆ ವಿಷಯ ಕುರಿತು, ಯುವ ಸ್ಪಂದನದ ಯುವ ಸಮಾಲೋಚಕ ರವಿಕುಮಾರ್ ಯುವ ಜನರಿಗಾಗಿ ಜೀವನ ಕೌಶಲ್ಯ ಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಜೆಎಸ್ಎಸ್ಐಟಿಐ ಕಾಲೇಜಿನ ಪ್ರಾಂಶುಪಾಲ ಬಿ ಶಿವರಾಜ್ ಅವರು ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಎಸ್ಐಟಿಐ ಕಾಲೇಜಿನ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಕಾರ್ಯಗಾರ ಕುರಿತು ಮಾತನಾಡಿದರು. ಜೆಎಸ್ಎಸ್ಐಟಿಐ ಕಾಲೇಜಿನ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೆಹರು ಯುವ ಕೇಂದ್ರದ ಸಹನಾ ಮತ್ತು ಶಂಕರ್ ಭಾಗವಹಿಸಿದ್ದರು.



