ಬೆಂಗಳೂರು: ಭ್ರಷ್ಟ ಶಾಸಕ ಮಾಡಾಳು ವಿರೂಪಾಕ್ಷಪ್ಪರವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ಅರ್ಜಿ ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲರು ಹಾಜರಾಗಿದ್ದು ನ್ಯಾಯಮೂರ್ತಿಗಳು ಆದೇಶದ ಡಿಕ್ಟೇಶನ್ ನೀಡುವಾಗ. ಜೊತೆಗೆ ನ್ಯಾಯಮೂರ್ತಿಗಳು ಆಕ್ಷೇಪಣೆ ಸಲ್ಲಿಕೆಯ ಬಗ್ಗೆ ಕೇಳಿದಾಗ ತನಿಖಾಧಿಕಾರಿಯನ್ನು ಕೇಳಬೇಕು ಎಂದಿದ್ದಾರೆ. ಇದರರ್ಥವೇನು? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಟೆಂಡರ್ ಗಾಗಿ ಲಂಚ ಪ್ರಕರಣದಲ್ಲಿ ಮಾಡಾಳ್ ವಿರುಪಾಕ್ಷಪ್ಪ ಅವರಿಗೆ ಜಾಮೀನು ಮಂಜೂರು ಆದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪಬ್ಲಿಕ್ ಪ್ರಾಸಿಕ್ಯೂಟರ್ ಸರ್ಕಾರದ ಪ್ರತಿನಿಧಿ. ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಿಚಾರಣೆಯಲ್ಲಿ ಪ್ರಾಸಿಕ್ಯೂಟರ್ ಯಾವ ಕಾರಣಕ್ಕಾಗಿ ಆಕ್ಷೇಪಣೆ ಸಲ್ಲಿಸಲಿಲ್ಲ? ಆಕ್ಷೇಪಣೆ ಸಲ್ಲಿಸುವುದು ನ್ಯಾಯ ಪ್ರಕ್ರಿಯೆಯ ಅತಿ ಮುಖ್ಯ ಅಂಶ. ಆಕ್ಷೇಪಣೆ ಸಲ್ಲಿಸದಂತೆ ಪ್ರಾಸಿಕ್ಯೂಟರ್‌ಗೆ ಹೇಳಿದವರು ಯಾರು? ಸರ್ಕಾರದ ನಿರ್ದೇಶನವಿಲ್ಲದೆ ಇದು ಸಾಧ್ಯವೇ? ಎಂದಿದ್ದಾರೆ.
ಭ್ರಷ್ಟ ಶಾಸಕ ಮಾಡಾಳು ವಿರೂಪಾಕ್ಷಪ್ಪ ರಕ್ಷಣೆಗೆ ಈ ಸರ್ಕಾರ ನಿಂತಿರುವುದರಲ್ಲಿ ಯಾವ ಸಂಶಯವೂ ಇಲ್ಲ. ಮನೆಯಲ್ಲೇ ಇದ್ದರೂ ವಿರೂಪಾಕ್ಷಪ್ಪರನ್ನು ಬಂಧಿಸದೇ ಇದ್ದದ್ದು, ಜಾಮೀನು ವಿಚಾರಣೆಗೆ PP ತಡವಾಗಿ ಆಗಮಿಸಿದ್ದು, ಜಾಮೀನು ನೀಡಲು ಆಕ್ಷೇಪಣೆ ಸಲ್ಲಿಸದೇ ಇರುವುದು ಅನುಮಾನ ಹುಟ್ಟಿಸುವುದಿಲ್ಲವೇ? ಇದು ಭ್ರಷ್ಟ ರಕ್ಷಕ ಸರ್ಕಾರ ಎಂದು ಹೇಳಿದ್ದಾರೆ.



