ಬಿಜೆಪಿಯಿಂದ ಮಾರ್ಚ್ ಮೊದಲ ವಾರ ಏಕಕಾಲಕ್ಕೆ ರಥಯಾತ್ರೆ

3 years ago

ಬೆಂಗಳೂರು: ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಶತಾಯ ಗತಾಯ ಪ್ರಯತ್ನ ನಡೆಸಿದೆ‌. ಇದಕ್ಕಾಗಿ ರಾಜ್ಯದ ನಾಲ್ಕು ದಿಕ್ಕುಗಳಿಂದ ಮಾರ್ಚ್ ಮೊದಲ ವಾರ
ಏಕಕಾಲಕ್ಕೆ ರಥಯಾತ್ರೆ ಕೈಗೊಳ್ಳಲು ನಿರ್ಧರಿಸಿದೆ.
ಇದಕ್ಕಾಗಿ ಸಿದ್ಧತೆ ಆರಂಭವಾಗಿದ್ದು, ಯಾತ್ರೆ ನಾಲ್ಕುತಂಡಗಳಲ್ಲಿ 20-25 ದಿನ ಕಾಲ ನಡೆಯಲಿದೆ.

ಎಲ್ಲಾ ಸಮುದಾಯದವರನ್ನು ತನ್ನತ್ತ ಸೆಳೆಯುವ ದೃಷ್ಟಿಯಿಂದ ಈ ರಥಯಾತ್ರೆಯ ರಥಗಳಿಗೆ ವಿವಿಧ ಸಮುದಾಯಗಳ ಪ್ರಮುಖರ ಹೆಸರನ್ನಿಡಲು ತೀರ್ಮಾನಿಸಿದೆ.

ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಕೆಂಪೇಗೌಡರ ಹೆಸರಿನಲ್ಲಿ ರಥ ಸಿದ್ಧವಾಗುತ್ತಿದೆ. ಅದೇ ರೀತಿಯಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಮಹರ್ಷಿ ವಾಲ್ಮೀಕಿ, ನಾರಾಯಣ ಗುರು, ಮಲೆ ಮಹದೇಶ್ವರ ಮೊದಲಾದ ಹೆಸರುಗಳನ್ನು ಪರಿಶೀಲಿಸುತ್ತಿದ್ದು ಇವುಗಳನ್ನು ರಥಗಳಿಗೆ ಹೆಸರಿಸುತ್ತಿದ್ದು ಇವುಗಳ ನೇತೃತ್ವವನ್ನು ಆಯಾ ಸಮುದಾಯದ ಮುಖಂಡರಿಗೆ ನೀಡಲು ಬಿಜೆಪಿಯ ಚಿಂತಕರ ಚಾವಡಿ ನಿರ್ಧರಿಸಿದೆ.

ಈ ರಥಯಾತ್ರೆಗಳಲ್ಲಿ ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ, ನಳಿನ್‌ಕುಮಾರ್‌ ಕಟೀಲ್, ಅರುಣ್‌ಸಿಂಗ್, ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು ನೇತೃತ್ವದಲ್ಲಿ ಸಾಗಲಿವೆ. ಇವರ ಜತೆ ರಾಜ್ಯ ಮತ್ತು ಕೇಂದ್ರದ
ಸಚಿವರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾತ್ರೆಯ ವಿವರ ಎರಡು ದಿನಗಳಲ್ಲಿ
ಹೊರಬೀಳಲಿದೆ. 224 ವಿಧಾನಸಭಾ ಕ್ಷೇತ್ರಗಳಿಗೂ
ಗೆ ರಥಯಾತ್ರೆ ಪ್ರವೇಶಿಸಲಿದೆ. ಅಂತಿಮವಾಗಿ ನಾಲ್ಕು ಯಾತ್ರೆಗಳ ಮಹಾಸಂಗಮ ದಾವಣಗೆರೆಯಲ್ಲಿ ನಡೆಯಲಿದೆ.

ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಈ ಯಾತ್ರೆಗಳು ನಿರ್ಣಾಯಕವಾಗಲಿವೆ. ಈ ಯಾತ್ರೆಯ ಮೂಲಕ ಬಿಜೆಪಿ ಪರವಾದ ಅಲೆ ಎಬ್ಬಿಸುವುದು ಬಿಜೆಪಿ ನಾಯಕರ ಉದ್ದೇಶಿಸಲಾಗಿದೆ.

Leave a Reply