ಕಾಂಗ್ರೆಸ್ ನಾಯಕರಿಂದ ಬಸ್ ಯಾತ್ರೆ: ಡಿ.ಕೆ.ಶಿವಕುಮಾರ್

3 years ago

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಇದೇ 11ರಿಂದ ರಾಜ್ಯ ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಆರಂಭವಾಗಲಿದೆ. ರಾಜ್ಯವನ್ನು ಉತ್ತರ ಮತ್ತು ದಕ್ಷಿಣ ಕರ್ನಾಟಕವೆಂದು ವಿಭಾಗ ಮಾಡಿಕೊಂಡು ವಿರೋಧ ಪಕ್ಷದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರು ಯಾತ್ರೆ ಕೈಗೊಳ್ಳಲಿದ್ದಾರೆ.

ಈ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಸಿದ್ದರಾಮಯ್ಯ ಮತ್ತು ನಾನು ಜೊತೆಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಇದರಲ್ಲಿ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡಲಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಬೆಲೆ ಏರಿಕೆ ದೊಡ್ಡ ಪಿಶಾಚಿಯಾಗಿದೆ. ಬದುಕಿನಲ್ಲಿ ಪ್ರತಿ ದಿನ ಜನರನ್ನು ಕಾಡುವ ಮೂಲಕ ಭಾರೀ ಸಮಸ್ಯೆ ಸೃಷ್ಟಿಸಿದೆ. ಜನರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಯಾರಿಗೂ ಆದಾಯ ಏರಿಕೆಯಾಗಿಲ್ಲ. ಅಡುಗೆ ಎಣ್ಣೆ 95 ರಿಂದ 225 ರೂ ಆಗಿದೆ, ಗೋಧಿ ಹಿಟ್ಟಿನ ಬೆಲೆ ದ್ವಿಗುಣಗೊಂಡಿದೆ,ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆಯಂತೂ ಹೇಳಲು ಅಸಾಧ್ಯವಾದ ಮಟ್ಟಿಗೆ ಹೆಚ್ಚಾಗಿದೆ. ಎಲ್ಲಾ ವಸ್ತುಗಳ ಬೆಲೆ ಶೇ.60ರಷ್ಟು ಬೆಲೆ ಏರಿಕೆಯಾಗಿದೆ ಎಂದರು.

ಬಿಜೆಪಿ ಪ್ರಣಾಳಿಕೆಯಲ್ಲಿ 660 ಭರವಸೆ ನೀಡಿತ್ತು, ಅದರಲ್ಲಿ ಶೇ.10ರಷ್ಟು ಮಾತ್ರ ಈಡೇರಿಸಿ ಉಳಿದ ಶೇ.90ರಷ್ಟು ಬಾಕಿ ಉಳಿಸಿದೆ. ನಾವು ಪ್ರತಿದಿನ ಒಂದೊಂದು ಪ್ರಶ್ನೆ ಕೇಳುತ್ತಿದ್ದೇವೆ. ಆದರೆ ಬಿಜೆಪಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್ ಪ್ರಣಾಳಿಕೆಯ ಶೇ.99ರಷ್ಟು ಭರವಸೆಗಳನ್ನು ಈಡೇರಿಸಿದೆ ಎಂದರು.

ಬಿಜೆಪಿ ನಾಯಕರು ದೇವಸ್ಥಾನ, ಮಂದಿರ ಎಂದು ಭಾವನಾತ್ಮಕ ರಾಜಕಾರಣ ಮಾಡುತ್ತಿದ್ದಾರೆ. ನಾವು ಪ್ರಗತಿಯ ಬಗ್ಗೆ ಮಾತನಾಡುತ್ತಿದ್ದೇವೆ. ಬಿಜೆಪಿ ಧರ್ಮಾಧಾರಿತವಾಗಿ ಸಮಾಜವನ್ನು ವಿಭಜಿಸುತ್ತಿದೆ. ಬಿಜೆಪಿಯ ಕೋಮುವಾದದಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಬಂಡವಾಳ ಹೂಡಿಕೆಯಲ್ಲಿ ಹಿನ್ನಡೆಯಾಗಿದೆ. ನಮ್ಮ ಪಕ್ಷ ಬಡವರ ಹಸಿವಿನ ಬಗ್ಗೆ ಯೋಜಿಸುತ್ತೇವೆ. ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ಭಾವನಾತ್ಮಕ ರಾಜಕಾರಣ ಮಾಡುತ್ತಿದೆ. ನಾನು 300 ದೇವಸ್ಥಾನ ಕಟ್ಟಿಸಿದ್ದೇನೆ. ಹಾಗೆಂದು ಹಿಂದು ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಕೆ ಎಂದು ಪ್ರಶ್ನಿಸಿದರು.

ಪ್ರಿಯಾಂಕಾ ಭೇಟಿ: ಇದೇ ತಿಂಗಳ 16ರಂದು ನಗರದ ಅರಮನೆ ಮೈದಾನದಲ್ಲಿ ಮಹಿಳಾ ನಾಯಕಿಯರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯತ್, ಸಹಕಾರ ಸಂಘಗಳು ಸೇರಿದಂತೆ ಸಂಸತ್‍ವರೆಗೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಹೆಣ್ಣುಮಕ್ಕಳು ಭಾಗವಹಿಸಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಹಿಳಾ ನಾಯಕಿಯರ ಕೊಡುಗೆಗಳ ಬಗ್ಗೆ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯದ ಪ್ರತಿಯೊಂದು ಪಂಚಾಯತ್‍ನಿಂದ ಕನಿಷ್ಠ 10 ಮಂದಿ, ಬೂತ್ ಮಟ್ಟದಿಂದ ಕನಿಷ್ಠ 3 ನಾಯಕಿಯರು ಭಾಗವಹಿಸಬೇಕು. ರಾಜ್ಯದ ಎಲ್ಲಾ ಭಾಗಗಳಿಂದ ಮಹಿಳಾ ನಾಯಕಿಯರು ಆಗಮಿಸಬೇಕು ಎಂದು ಸೂಚಿಸಲಾಗಿದೆ ಎಂದರು.

Leave a Reply