ಮಳೆಗಾಲದ ಸಮಸ್ಯೆಗೆ ಶಾಶ್ವತ ಪರಿಹಾರ: ಅಶ್ವತ್ಥ ನಾರಾಯಣ

4 years ago

ಬೆಂಗಳೂರು: ಹಿಂದೆಂದು ಕಂಡುಕೇಳರಿಯದ ಮಳೆಯಿಂದ ಸೃಷ್ಟಿಯಾಗಿರುವ ಪ್ರವಾಹಕ್ಕೆ ಸಿಲುಕಿ ನಲುಗಿರುವ ಮಹದೇವಪುರ ವಲಯದ ಸಮಸ್ಯೆಗೆ ಮುಂದಿನ ಮಳೆಗಾಲದ ವೇಳೆಗೆ ಶಾಶ್ವತ ಪರಿಹಾರ ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ. ಎನ್. ಅಶ್ವತ್ಥನಾರಾಯಣ ಹೇಳಿದರು.

ಮಹದೇವಪುರ ಭಾಗದ ಹಲವು ಐಟಿ ಕಂಪನಿಗಳ ಮುಖ್ಯಸ್ಥರ ಜತೆ ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಬ್ರಾಂಡ್ ಅನ್ನು ಎಲ್ಲರೂ ಸೇರಿ ಉಳಿಸೋಣ. ಇದಕ್ಕೆ ಅಪಕೀರ್ತಿ ತರುವುದು ಬೇಡ. ಉದ್ಯಮಿಗಳ ಸಮಸ್ಯೆಗಳನ್ನು ಆಲಿಸಲು ಇನ್ನುಮುಂದೆ ಪ್ರತೀ ತಿಂಗಳೂ ವರ್ಚುಯಲ್ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಐಟಿ ಕಂಪನಿಗಳ ಪ್ರಮುಖರು ನಮಗ್ಯಾರಿಗೂ ಬೆಂಗಳೂರನ್ನು ಬಿಟ್ಟು ಹೋಗುವ ಮನಸ್ಸಿಲ್ಲ. ಮಳೆಯಿಂದ ಉಂಟಾಗಿರುವ ಸಮಸ್ಯೆ ಮತ್ತು ನಷ್ಟವನ್ನು ಸರಕಾರದ ಗಮನಕ್ಕೆ ತರುವುದಷ್ಟೇ ನಮ್ಮ ಉದ್ದೇಶವಾಗಿದೆ. ಸರಕಾರದ ಸ್ಪಂದನದಿಂದ ನಮಗೂ ಸಮಾಧಾನವಾಗಿದೆ ಎಂದರು.

ಮಹದೇವಪುರದಲ್ಲಿರುವ ಬಿಬಿಎಂಪಿ ವಲಯ ಆಯುಕ್ತರಿಗೆ ಸಂಪೂರ್ಣ ಅಧಿಕಾರವಿದೆ. ಇಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಐಟಿ ಕಂಪನಿಗಳ ಸಹಭಾಗಿತ್ವ ಪಡೆಯಲಾಗುವುದು. ಇದರೊಂದಿಗೆ ಎಲ್ಲಾ ಯೋಜನೆಗಳನ್ನೂ ಕಾಲಮಿತಿಯಲ್ಲಿ ಮುಗಿಸಲಾಗುವುದು. ಇವುಗಳ ಅನುಷ್ಠಾನದಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಗುವುದು. ಇದರ ಜತೆಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಎಲ್ಸಿಟಾ ಮಾದರಿಯ ವ್ಯವಸ್ಥೆಯನ್ನು ಇಲ್ಲೂ ಆರಂಭಿಸುವುದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದರು.

ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಕೆ-100 ವ್ಯವಸ್ಥೆಯನ್ನು ಮಹದೇವಪುರದಲ್ಲೂ ಅಳವಡಿಸಿಕೊಳ್ಳಲಾಗುವುದು. ಈ ಭಾಗಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆಯ 5ನೇ ಹಂತದ ಮೂಲಕ ನೀರು ಸರಬರಾಜು ಮಾಡಲಾಗುವುದು. ಈ ಕುರಿತು ರಾಜ್ಯದ 2ನೇ ಸ್ತರದ ನಗರಗಳತ್ತಲೂ ಗಮನ ಹರಿಸಲಾಗುವುದು. ಆದ್ದರಿಂದ ಯಾವ ಉದ್ಯಮಿಗಳೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಭರವಸೆ ನೀಡಿದರು.

ಸರಕಾರ ಐಟಿ-ಬಿಟಿ ಕಂಪನಿಗಳ ಅಹವಾಲುಗಳನ್ನು ಕೇಳಿ, ಅವುಗಳನ್ನು ಪರಿಹರಿಸಲೆಂದು ವಿಷನ್ ಗ್ರೂಪ್‌ಗಳನ್ನು ರಚಿಸಿದೆ. ಇದಕ್ಕೆ ಐಟಿ ಕಂಪನಿಗಳನ್ನು ನಡೆಸಿರುವವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಸರಕಾರದ ಸ್ಪಂದನಶೀಲತೆಗೆ ಇದಕ್ಕಿಂತ ನಿದರ್ಶನ ಬೇಕಾಗಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್‌ ಗೋಪಾಲಕೃಷ್ಣನ್, ಬೆಂಗಳೂರು ಬ್ರಾಂಡ್ ಎಲ್ಲಿಗೂ ಹೋಗುವುದಿಲ್ಲ. ಇಂತಹ ಮಹಾಮಳೆ ಬಂದರೆ ಎಂತಹ ನಗರವಾದರೂ ಸ್ತಬ್ಧವಾಗುತ್ತದೆ. ಶೇ.80ಕ್ಕಿಂತ ಹೆಚ್ಚಿನ ಭಾಗಕ್ಕೆ ಇಲ್ಲಿ ಏನೂ ಆಗಿಲ್ಲ. ಮಹದೇವಪುರದ ಭಾಗದಲ್ಲಿ ಆಗಿರುವ ಹಾನಿ ಅನಿರೀಕ್ಷಿತ. ಇದರಿಂದ ಐಟಿ ಕಂಪನಿಗಳು ಧೃತಿಗೆಡಬಾರದು. ಸರಕಾರ ಸದಾ ನಿಮ್ಮೊಂದಿಗಿರುತ್ತದೆ ಎಂದರು.

ಉದ್ಯಮಿ ಮೋಹನ್‌ದಾಸ್‌ ಪೈ ನಗರದ ಸಮಸ್ಯೆಗಳ ಬಗ್ಗೆ ಖಾರವಾದ ಟ್ವೀಟ್‌ಗಳನ್ನು ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆಂಗಳೂರನ್ನು ಈ ಮಟ್ಟಕ್ಕೆ ಬೆಳೆಸುವಲ್ಲಿ ಅವರ ಕೊಡುಗೆ ಇದೆ. ಇದೇ ನಗರದ ಬಗ್ಗೆ ಅವರು ಹಲವು ಒಳ್ಳೆಯ ಟ್ವೀಟ್‌ಗಳನ್ನು ಮಾಡಿದ್ದಾರೆ. ಅದನ್ನು ಮರೆತು, ಈಗಿನ ಟ್ವೀಟ್‌ಗಳ ಬಗ್ಗೆಯೇ ಚರ್ಚಿಸುವುದು ಸರಿಯಲ್ಲ. ಅವರು ನಗರದ ಬಗ್ಗೆ ಕಳಕಳಿ ಇಟ್ಟುಕೊಂಡೇ ಇವುಗಳನ್ನು ಮಾಡಿದ್ದಾರೆ. ಅವರ ಕಳವಳವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಷ್ಟೆ ಎಂದರು.

ಸಭೆಯಲ್ಲಿ ಸಭೆಯಲ್ಲಿ ಐಟಿ ಕಂಪನಿಗಳ ವಲಯದಿಂದ ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌ನ ರವಿಕೃಷ್ಣನ್, ಇನ್ಫೋಸಿಸ್‌ನ ಸುನೀಲ್‌ಕುಮಾರ್ ಮತ್ತು ಬಿ.ಸಿ.ಶೇಷಾದ್ರಿ‌, ವೆಲ್ಸ್‌ಫಾರ್ಗೋ ಕಂಪನಿಯ ಅರಿಂದಮ್‌ ಬ್ಯಾನರ್ಜಿ, ವಿಪ್ರೋದ ಪರಮಿಂದರ್ ಕಾಕ್ರಿಯಾ, ಇಂಫೋಸಿಸ್‌ನ ದೀಪಾ ನಾಗರಾಜ್‌, ಇಂಟೆಲ್‌ನ ಮಾನಸ್‌ ದಾಸ್‌, ವಿಎಂ ವೇರ್ ನ ರಾಮಕುಮಾರ್ ನಾರಾಯಣನ್ ಮತ್ತು ಜಯನ್‌ ದೇಸಾಯಿ, ಟಿಸಿಎಸ್‌ನ ಬೆಂಗಳೂರು ಮುಖ್ಯಸ್ಥ ಸುನೀಲ್ ದೇಶಪಾಂಡೆ, ಆಕ್ಸೆಂಚರ್ ನ ಅಜಯ್ ವಿಜ್‌, ಸೊನಾಟಾ ಸಾಫ್ಟ್‌ವೇರ್ ನ ಬಾಲಾಜಿ ಕುಮಾರ್, ಫಿಲಿಪ್ಸ್‌ನ ಅರವಿಂದ್ ವೈಷ್ಣವ್, ಸೊಲೇಸ್‌ನ ಮಹಾದೇವನ್, ನಾಸ್ಕಾಂನ ಕೆ.ಎಸ್. ವಿಶ್ವನಾಥನ್ ಮತ್ತು ಭಾಸ್ಕರ್ ವರ್ಮಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ, ಮೆಟ್ರೋ ಎಂಡಿ ಅಂಜುಂ ಪರ್ವೇಜ್‌, ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಐಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್ ಇದ್ದರು.

Leave a Reply