ರಾಮೇಶ್ವರ ಕೆಫೆ ಸ್ಫೋಟ ವ್ಯಕ್ತಿಯನ್ನು ಪತ್ತೆ ಹಚ್ಚಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ: ಸಿದ್ದರಾಮಯ್ಯ

2 years ago

ಬೆಂಗಳೂರು: ವೈಟ್ ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿನ ಸ್ಪೋಟ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ನಿರ್ಧರಿಸಿರುವ ಸರ್ಕಾರ ತನಿಖೆಯ ಸಮಗ್ರ ಮಾಹಿತಿಯನ್ನು ರಾಷ್ಟ್ರೀಯ ತನಿಖಾದಳದ ಜೊತೆಗೆ ಹಂಚಿಕೊಳ್ಳಲು ತೀರ್ಮಾನಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ನಂತರ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವರನ್ನು ಭೇಟಿ ಮಾಡಿ ಧೈರ್ಯ ಹೇಳಿದರು.

ಬಳಿಕ ಗೃಹ ಸಚಿವ ಪರಮೇಶ್ವರ್ ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಘಟನೆ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಸೂಚಿಸಿದ ಅವರು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸುವಂತೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಂಭೀರ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವ ಸಂಘಟನೆ, ಯಾರ ಕೈವಾಡ ಎಂಬುದನ್ನು ಹೇಳಲು ಸಾಧ್ಯವಿಲ್ಲ. ತನಿಖೆ ಗಂಭೀರವಾಗಿ ನಡೆಯುತ್ತಿದೆ. ವ್ಯಕ್ತಿಯನ್ನು ಪತ್ತೆ ಹಚ್ಚಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಸ್ಪೋಟ ಸಂಭವಿಸಿರುವುದಂತೂ ನಿಜ. ಮಾಸ್ಕ್ ಹಾಗೂ ಟೋಪಿ ಧರಿಸಿದ್ದ ಒಬ್ಬ ವ್ಯಕ್ತಿ ಬಸ್ನಲ್ಲಿ ಬಂದು ಹೋಟೆಲ್ನ ಕೌಂಟರ್ನಲ್ಲಿ ರವೆ ಇಡ್ಲಿಯನ್ನು ತೆಗೆದುಕೊಂಡು ಟೇಬಲ್ನಲ್ಲಿ ಕುಳಿತು ತಿಂದು ಕೈ ತೊಳೆಯುವ ಸಂದರ್ಭದಲ್ಲಿ ಬ್ಯಾಗ್ ಅನ್ನು ಬಿಟ್ಟು ಹೊರಹೋಗಿದ್ದಾನೆ. ಅದು ಸ್ಪೋಟಗೊಂಡು 9 ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದರು, ನಾನೂ ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದೆ ಎಂದರು.

ಬಾಂಬ್ ಇಟ್ಟ ಬಳಿಕ ಆರೋಪಿ ಬಸ್ನಲ್ಲಿ ವಾಪಸ್ ಹೋಗಿದ್ದಾನೆ. ಪೊಲೀಸರು ಎಲ್ಲಾ ರೀತಿಯ ತನಿಖೆಗಳನ್ನೂ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಇದು ಭಯೋತ್ಪಾದಕರ ಕೃತ್ಯವೇ ಅಥವಾ ಯಾವುದಾದರೂ ಸಂಘಟನೆ ಭಾಗಿಯಾಗಿದೆಯೇ? ವೈಯಕ್ತಿಕ ದುಷ್ಕೃತ್ಯವೇ ಎಂಬುದು ಗೊತ್ತಾಗಿಲ್ಲ ಎಂದರು.

ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಘಟನೆ ನಡೆದ ತಕ್ಷಣ ತಜ್ಞರ ದೊಡ್ಡ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ. ಬಾಂಬ್ನಲ್ಲಿ ಟೈಮರ್ ಅಳವಡಿಸಿರುವುದು, ಯಾವ ರೀತಿಯ ಸ್ಪೋಟಕ ಬಳಸಲಾಗಿದೆ, ಬಾಂಬ್ ಸಾಮರ್ಥ್ಯ ಎಷ್ಟು ಎಂಬೆಲ್ಲಾ ವಿವರಗಳನ್ನೂ ಕಲೆ ಹಾಕಿಕೊಂಡಿದ್ದಾರೆ. ಇದೂ ಕೂಡ ತನಿಖೆಗೆ ಸಹಾಯವಾಗಲಿದೆ ಎಂದರು.

ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಾಂಬ್ ಸ್ಪೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಅನೇಕ ತಂಡಗಳನ್ನು ರಚನೆ ಮಾಡಲಾಗಿದೆ. ತನಿಖೆ ಆಳವಾಗಿ ನಡೆಯುತ್ತಿದೆ. ಕೆಲ ಕುರುಹುಗಳು ಸಿಕ್ಕಿವೆ. ಆ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ ಎಂದರು.

ಆರೋಪಿ ಎಷ್ಟೇ ಪ್ರಯತ್ನ ಪಟ್ಟರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಪ್ಲಾನ್ ಆಫ್ ಆಕ್ಷನ್ ಕೂಡ ನಾವು ಕಲೆ ಹಾಕಿದ್ದೇವೆ. ಯಾವ ಸಂಘಟನೆ ಕೈವಾಡವಿದೆ ಎಂಬುದು ಗೊತ್ತಿಲ್ಲ. ನಿನ್ನೆ ನಾವು ಸ್ಥಳಕ್ಕೆ ಹೋಗಿದ್ದಾಗ ರಾಮೇಶ್ವರಂ ಕೆಫೆಯವರು ನಾಲ್ಕೈದು ಹೋಟೆಲ್ಗಳನ್ನು ಮಾಡಿದ್ದು, ಯಶಸ್ವಿ ಉದ್ಯಮ ನಡೆಸುತ್ತಿದ್ದರು. ಆ ಹೊಟ್ಟೆ ಉರಿಗೂ ಈ ರೀತಿ ಕೃತ್ಯಗಳು ನಡೆದಿರಬಹುದು ಎಂಬ ಶಂಕೆ ಕೇಳಿಬಂದಿದ್ದವು. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತೇವೆ ಎಂದರು.

Leave a Reply