ಜಾತಿವಾರು ಜನಗಣತಿಗೆ ವೀರಶೈವ-ಲಿಂಗಾಯತ ಮಹಾಸಭಾ ವಿರೋಧ ವ್ಯಕ್ತಪಡಿಸಿಲ್ಲ: ಎಂ.ಬಿ.ಪಾಟೀಲ್

2 years ago

ಬೆಂಗಳೂರು: ಜಾತಿವಾರು ಜನಗಣತಿಗೆ ವೀರಶೈವ-ಲಿಂಗಾಯತ ಮಹಾಸಭಾ ವಿರೋಧ ವ್ಯಕ್ತಪಡಿಸಿಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ಜಾತಿಗೆ ಸೇರಿದ ಉಪಜಾತಿಗಳಿಗೆ ಮೀಸಲು ಸೌಲಭ್ಯ ಸಿಗುವುದಕ್ಕೆ ಸಂಬಂಧಿಸಿದಂತೆ ಗೊಂದಲಗಳಿವೆ. ಇದನ್ನು ಸರಿಪಡಿಸಿ ಎಂದು ಸಿಎಂ ಅವರಲ್ಲಿ ಕೇಳಿಕೊಂಡಿದ್ದೇವೆ ಎಂದು ಹೇಳಿದರು.

ಇರುವ ಸಮಸ್ಯೆಗಳನ್ನು ಗಮನಕ್ಕೆ ತರುವುದರಲ್ಲಿ ಯಾವುದೇ ತಪ್ಪು ಇಲ್ಲ. ಉದಾಹರಣೆಗೆ, ಲಿಂಗಾಯತರಲ್ಲಿ ಗಾಣಿಗ, ಸಾದರ ಹೀಗೆ 50ಕ್ಕೂ ಹೆಚ್ಚು ಉಪಜಾತಿಗಳು ಇದ್ದು ಅವರಿಗೆ ಲಿಂಗಾಯತ-ಗಾಣಿಗ, ಲಿಂಗಾಯತ- ಸಾದರ ಎಂದು ನಮೂದಿಸಿದ್ದರೆ 2ಎ ಪ್ರವರ್ಗದಡಿ ಮೀಸಲಾತಿ ಸಿಗುವುದಿಲ್ಲ. ಈ ಕಾರಣಕ್ಕೆ ಅವರೆಲ್ಲ ಹಿಂದೂ-ಗಾಣಿಗ ಹಿಂದೂ-ಸಾದರ ಎಂದು ನಮೂದಿಸಿಕೊಳ್ಳುತ್ತಾರೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ನಾವು ಸಿಎಂ ಅವರನ್ನು ಕೋರಿದ್ದೇವೆ. ಈ ತೊಂದರೆಗಳ ಬಗ್ಗೆ ಅವರಿಗೂ ಗೊತ್ತಿದೆ ಎಂದರು.

ಇಂತಹ ತೊಡಕುಗಳು ಒಕ್ಕಲಿಗ ಜನಾಂಗ ಸೇರಿದಂತೆ ಬೇರೆ ಸಮುದಾಯಗಳಿಗೂ ಇರಬಹುದು. ಇದ್ದರೆ, ಅವನ್ನು ಕೂಡ ಸರಿಪಡಿಸುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.

ಜಾತಿವಾರು ಜನಗಣತಿಯ ವರದಿ ಸ್ವೀಕರಿಸಬಾರದು ಎಂದು ಮಹಾಸಭಾ ನೀಡಿರುವ ಮನವಿಗೆ ಸಹಿ ಹಾಕಿರುವ ವಿಷಯ ವಿವಾದ ಕುರಿತು ಸ್ಪಷ್ಟನೆ ನೀಡಿದ ಅವರು, ಸರ್ಕಾರದ ಭಾಗವಾಗಿ ಸಚಿವರು ವರದಿಗೆ ಸಹಿ ಹಾಕಿದ್ದಾರೆ ಎಂಬ ಆಕ್ಷೇಪ ಅನಗತ್ಯ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಎಲ್ಲರೂ ಈ ರೀತಿಯ ಮನವಿಗಳನ್ನು ನೀಡಿದ್ದಾರೆ. ನಮಗೂ ಆತಂಕಗಳಿವೆ ಎಂದರು.

ನಾವು ಸಮಾವೇಶ ಮಾಡುತ್ತಿರುವುದು ವರದಿಯನ್ನು ವಿರೋಧಿಸಿ ಅಲ್ಲ. ಗೊಂದಲವನ್ನು ಸರಿಪಡಿಸಿ ಎಂದು ಮುಖ್ಯಮಂತ್ರಿಯವರ ಸಭೆಯಲ್ಲಿ ನಾನೇ ಒತ್ತಾಯಿಸಿದ್ದೇನೆ. ಒಕ್ಕಲಿಗ ಸಮುದಾಯ ಒಂದೇ ಶೀರ್ಷಿಕೆಯಡಿ ಬಂದರೂ ಕೂಡ ಅಲ್ಲೂ ಈ ರೀತಿಯ ಗೊಂದಲಗಳಾಗಿವೆ. ಕೆಲವರು ಉಪಜಾತಿಯನ್ನು ಬರೆಸಿಲ್ಲ, ಇನ್ನೂ ಕೆಲವರು ಉಪಜಾತಿಯನ್ನಷ್ಟೇ ಬರೆಸಿದ್ದಾರೆ. ಇವೆಲ್ಲವನ್ನೂ ಸರಿಪಡಿಸಬೇಕಿದೆ ಎಂದರು.

ಗೊಂದಲಗಳನ್ನು ಸರಿಪಡಿಸಿದರೆ ವರದಿ ಆಧಾರಿತವಾಗಿ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಜನಗಣತಿ ನಡೆಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ ಇದೆ. ನಮ್ಮದು ಸಮೀಕ್ಷೆ ಮಾತ್ರ. ನಾವು ವಿರೋಧ ಮಾಡುತ್ತಿದ್ದೇವೆ ಎಂಬ ಅಭಿಪ್ರಾಯ ಸರಿಯಲ್ಲ. ಉಪಜಾತಿಗಳ ಜನಸಂಖ್ಯೆಯನ್ನು ವರದಿ ನೀಡಿದ ನಂತರ ಲೆಕ್ಕ ಹಾಕಲು ಹೋದರೆ ಸಮಸ್ಯೆಗಳಾಗುತ್ತವೆ. ವರದಿ ಬಹಿರಂಗವಾಗುವ ಮುನ್ನವೇ ಅದರ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಇದಕ್ಕೆ ಅವಕಾಶಗಳಿವೆ ಎಂದರು.

Leave a Reply