ಬೆಂಗಳೂರು: ಪೋಲಿಸ್ ಇಲಾಖೆಯಲ್ಲಿ ಪೇದೆಗಳು ಸೇರಿದಂತೆ ಸುಮಾರು ಎರಡು ಸಾವಿರ ಹುದ್ದೆಗಳು ಖಾಲಿ ಇವೆ ಹಾಗೂ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಲಾಗುವುದು. ಮೊದಲ ಹಂತದಲ್ಲಿ 6000 ಪೇದೆಗಳ ಹುದ್ದೆ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರಕ್ಕೆ ಅನ್ವಯವಾಗುವಂತೆ ಎರಡೂವರೆ ಸಾವಿರ ಪೇದಗಳು ಹಾಗೂ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ 3500 ಹುದ್ದೆ ಭರ್ತಿಗೆ ಸದ್ಯದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.
ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿ 20,000 ಹುದ್ದೆಗಳ ನೇಮಕಾತಿ ಅಗತ್ಯವಿದೆ. ಈ ಎಲ್ಲವುಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಇತ್ಯರ್ಥಕ್ಕೆ ಬಾಕಿ ಇದೆ. ಪ್ರಕರಣ ಇತ್ಯರ್ಥಗೊಂಡ ನಂತರ ಇವುಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.
ಈ ಹಿಂದೆ ನಡೆದ 543 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಆ ಸಮಯದಲ್ಲಿ ಒಟ್ಟು ಐವತ್ತು ಸಾವಿರ ಮಂದಿ ಲಿಖಿತ ಪರೀಕ್ಷೆ ಬರೆದಿದ್ದರು. ಎಲ್ಲರಿಗೂ ಈಗ ಮತ್ತೊಮ್ಮೆ ಮರು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಅವಕಾಶ ನೀಡುವಂತೆ ಕೋರಿ ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ ಎಂದರು.
ಈ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಹಿಂದಿನ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು. ಅದನ್ನು ಪ್ರಶ್ನಿಸಿ ಹಲವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಸಕ್ತ ಸರ್ಕಾರ ಕೂಡ ಹಿಂದಿನ ಸರ್ಕಾರದ ತೀರ್ಮಾನದಂತೆ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ಕೋರಿ ಹೈಕೋರ್ಟಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಹೈಕೋರ್ಟ್ ತೀರ್ಪು ಬಂದು ಆನಂತರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡು ಹುದ್ದೆಗಳನ್ನು ಭರ್ತಿ ಮಾಡಲು ಹೆಚ್ಚಿನ ಸಮಯ ಅವಕಾಶದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಖಾಲಿ ಇರುವ ಪಿಎಸ್ ಐ ಹುದ್ದೆಗಳ ಭರ್ತಿಗೆ ಪರ್ಯಾಯ ಮಾರ್ಗ ಹುಡುಕಲಾಗಿದೆ. ಇಲಾಖೆಯಲ್ಲಿ ಸುಮಾರು 600 ರಿಂದ 700 ಎ ಎಸ್ ಐ ಗಳಿಗೆ ಬಡ್ತಿ ನೀಡಲಾಗುವುದು. ನಿಯಮ 32ರ ಅನ್ವಯ ಎ ಎಸ್ ಐ ಗಳನ್ನು ಪಿಎಸ್ಐ ಗಳಾಗಿ ಮುಂಬಡ್ತಿ ನೀಡಲಾಗುವುದು. ಅದೇ ರೀತಿಯಲ್ಲಿ ಮುಖ್ಯಪೇದೆ ಮತ್ತು ಪೇದೆಗಳಿಗೂ ಭಡ್ತಿ ನೀಡಲಾಗುವುದು ಇದರಿಂದ ಹಲವು ಹುದ್ದೆಗಳ ನೇಮಕಾತಿ ಆಗಲಿದೆ ಎಂದರು.




