100 ಕೋಟಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅನ್ ಲೈನ್ ಅಪ್ ಲೋಡ್ ಮಾಡಲಾಗುತ್ತಿದೆ: ಕೃಷ್ಣಭೈರೇಗೌಡ

10 months ago

ಬೆಂಗಳೂರು: ವಿವಿಧ ದಾಖಲೆಗಳಿಗಾಗಿ ಜನ ಸಾಮಾನ್ಯರು ತಾಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ತಾಲೂಕು  ಕಚೇರಿಗಳಲ್ಲಿನ 100 ಕೋಟಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅನ್ ಲೈನ್ ಅಪ್ ಲೋಡ್ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ 36 ಕೋಟಿ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದ್ದು, ಉಳಿದ ದಾಖಲೆಗಳನ್ನು ಅದಷ್ಟು ಶೀಘ್ರದಲ್ಲೇ ಸ್ಕ್ಯಾನ್ ಮಾಡಲಾಗುವುದು ಎಂದರು.

ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅನ್ ಲೈನ್ ಅಪ್ ಲೋಡ್ ಮಾಡುವುದರಿಂದ ತಮಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕರು ಬೆರಳತುದಿಯ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು ಎಂದರು.

ದಾಖಲೆಗಳನ್ನು ಸ್ಕ್ಯಾನ್ ಮಾಡುವುದರಿಂದ ನಕಲು ಮಾಡುವುದು ಅಸಾಧ್ಯವಾಗಿ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ,ದಾಖಲೆಗಳನ್ನು ನಕಲು ಮಾಡುವುದು ನಾಪತ್ತೆ ಮಾಡುವುದು ತಪ್ಪಲಿದೆ ಎಂದರು.

2 ಲಕ್ಷ ಪೋಡಿ: ರಾಜ್ಯದಲ್ಲಿ ಬರುವ ಡಿಸೆಂಬರ್ ವೇಳೆಗೆ ಮಂಜೂರಿದಾರರಿಗೆ 2 ಲಕ್ಷ ಪೋಡಿ ಮಾಡಿಕೊಡಲಾಗುವುದು. ಅರ್ಜಿ ಸಲ್ಲಿಸದಿದ್ದರೂ ಸರ್ಕಾರಿ ಮಂಜೂರಿ ಜಮೀನುಗಳ ಪೋಡಿ ಮಾಡಲಾಗುತ್ತಿದ್ದು ಅಭಿಯಾನದ ರೀತಿಯಲ್ಲಿ ಪೋಡಿ ಕೆಲಸ ನಡೆದಿದೆ ಎಂದರು.

ಕಳೆದ ಒಂದು ವರ್ಷದಿಂದ ಪೋಡಿ ಅಭಿಯಾನ ಆರಂಭಗೊಂಡಿದ್ದು, ಇಲ್ಲಿಯವರೆಗೆ 1.05 ಲಕ್ಷಕ್ಕೂ ಹೆಚ್ಚು ಜನರಿಗೆ ಪೋಡಿ ಮಾಡಿಕೊಡಲಾಗಿದೆ. ಮೊದಲಿಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಮಾಡುತ್ತಿದ್ದ ಪೋಡಿಯನ್ನು ಸರ್ಕಾರಿ ಮಂಜೂರಿ ಜಮೀನು ಹೊಂದಿರುವ ಎಲ್ಲರಿಗೂ ಮಾಡಿಕೊಡಲಾಗುತ್ತಿದೆ ಎಂದರು.

ಸರ್ಕಾರಿ ಮಂಜೂರಿ ಜಮೀನು ಹೊಂದಿರುವವರು ಮೊದಲು ನೀಡಬೇಕಿದ್ದ ಐದು ದಾಖಲೆಗಳನ್ನು ಮೂರಕ್ಕೆ ಇಳಿಸಿ ಮತ್ತೆ ಅದನ್ನು ಎರಡಕ್ಕೆ ಇಳಿಸಿ ಪೋಡಿ ಮಾಡಿಕೊಡಲಾಗುತ್ತಿದೆ ಎಂದರು.

ಕಳೆದ 2013ರಿಂದ 2018ರವರೆಗೆ 5.800 ಮಂದಿಗೆ 2018ರಿಂದ 2023 ರವರೆಗೆ 8500ಮಂದಿಗೆ ಮಾತ್ರ ಪೋಡಿ ಮಾಡಿಕೊಡಲಾಗಿತ್ತು,ಈಗ ಅದನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ ಎಂದರು.

ಸರ್ಕಾರಿ ಮಂಜೂರಿ ಜಮೀನು ಹೊಂದಿರುವವರು ಸಂಬಂಧಿಸಿದ ಎರಡು ದಾಖಲೆಗಳನ್ನು ಹೊಂದಿರದಿದ್ದಲ್ಲಿ ಪೋಡಿ ಮಾಡುವುದು ಕಷ್ಟವಾಗಲಿದೆ ಎಂದರು.

Leave a Reply