ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವವರಿಗೆ ಬುದ್ಧಿ ಇಲ್ಲ: ಜಿ.ಟಿ.ದೇವೇಗೌಡ

2 years ago

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಲ್ಲಿಸಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿರುವ ಬೆನ್ನಲ್ಲೇ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ದಸರಾ ಮಹೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವವರಿಗೆ ಬುದ್ಧಿ ಇಲ್ಲ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಮಾಡಿದರು. 

ಸಾರ್ವಜನಿಕ ಸಮಾರಂಭದಲ್ಲಿ ತಾವು ಮುಖ್ಯಮಂತ್ರಿ ಪರ ಎಂದು ಘೋಷಿಸಿದ ಅವರು, ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರೆಲ್ಲರಿಗೂ ದೇವಿ ಚಾಮುಂಡೇಶ್ವರಿ ಒಳ್ಳೆ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸಿದರು.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂಬ ಕಾರಣಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಎಫ್ ಐ ಆರ್ ಕಾರಣಕ್ಕೆ ರಾಜೀನಾಮೆ ಕೊಡಬೇಕು ಎಂದಾದರೆ ಎಫ್ಐಆರ್ ಆಗಿರೋ ಎಲ್ಲಾ ನಾಯಕರು ಕೊಡಲಿ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯೂ ಕೊಡಲಿ ಎಂದು ಸವಾಲೆಸೆದರು. 

ಎಲ್ಲರೂ ಗಾಜಿನ ಮನೆಯಲ್ಲಿ ಕೂತಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದೆಯಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? 136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ? ರಾಜೀನಾಮೆ ಕೊಡಿ ರಾಜೀನಾಮೆ ಕೊಡಿ ಅಂದರೆ ಕೊಡುವುದಕ್ಕೆ ಆಗುತ್ತಾ? ಒಂದು ಅತ್ಯಾಚಾರ, ಕೊಲೆ ಮೂರು ತಿಂಗಳು ಮಾಧ್ಯಮ ತೋರಿಸುತ್ತೆ. ಒಂದು ಎಫ್ಐಆರ್ ನಾ ಎಷ್ಟು ದಿನ ತೋರಿಸುತ್ತೀರಾ? ಯಾರ ಯಾರ ಮೇಲೆ ಎಫ್ ಐ ಆರ್ ಆಗಿದೆ ಅವರೆಲ್ಲರೂ ರಾಜೀನಾಮೆ ಕೊಡಿ ಎಂದು ಸವಾಲೆಸೆದರು.

Leave a Reply