ಗಾಂಧಿ ಎಂಬ ಧ್ಯಾನ

2 years ago

ಗಾಂಧೀಜಿ ನಿಧನರಾಗಿ ಈ ದಿನವಾದ ಜನವರಿ ಮುವತ್ತಕ್ಕೆ ಎಪ್ಪತ್ತಾರು ವರ್ಷ ಕಳೆಯಿತು. ಆದರೂ ಸಹ ಇಡೀ ಮನುಕುಲವನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ವರ್ತಮಾನದ ಜಗತ್ತು ಅವಸಾನದತ್ತ ದಾಪುಗಾಲಿನ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ ಗಾಂಧೀಜಿ ಬದುಕಿದ ವೈಖರಿ, ಅವರ ಚಿಂತನೆಗಳು ಹಾಗೂ ಆಡಿದ ಒಂದೊಂದು ಮಾತುಗಳು ಪ್ರತಿ ಕ್ಷಣವೂ ನಮ್ಮನ್ನು ಕಾಡುತ್ತಿವೆ.

ಗುಜರಾತಿನ ಪ್ರತಿಷ್ಠಿತ ಬನಿಯಾ ಸಮುದಾಯದ ಕುಟುಂಬದಲ್ಲಿ ಜನಿಸಿ, ಆ ಕಾಲಘಟ್ಟದಲ್ಲಿ ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಬಂದಿದ್ದ ಗಾಂಧೀಜಿಯವರು ಕೈ ತುಂಬಾ ಸಂಪಾದಿಸಿ ಬದುಕು ಕಟ್ಟಿಕೊಳ್ಳಬಹುದಿತ್ತು. ತಾವು ಕಂಡ ಸಮಾಜದ ಜನರ ನೋವನ್ನು, ಅಪಮಾನವನ್ನು ತನ್ನ ನೋವು ಅಪಮಾನಗಳೆಂದು ಭಾವಿಸಿದ ಅವರು ಬದುಕಿದ್ದಕ್ಕೂ ಹೋರಾಡುತ್ತಾ ಎಲ್ಲಾ ಬಗೆಯ ಟೀಕೆ, ಅಪಮಾನಗಳನ್ನು ಆಶೀರ್ವಾದ ಎಂದು ಸ್ವೀಕರಿಸಿದರು.

ಎದೆಯ ಆತ್ಮಸಾಕ್ಷಿಯ ಧ್ವನಿಗಿಂತ ಈ ಜಗತ್ತಿನಲ್ಲಿ ಯಾವ ಕಾನೂನುಗಳಿಲ್ಲ ಎಂದು ನಂಬಿದ್ದ ಅವರು ಬದುಕಿನ ಬಹುಪಾಲನ್ನು ಹೋರಾಟ, ಸತ್ಯಾಗ್ರಹ, ಮತ್ತು ಸೆರೆಮನೆಗಳಲ್ಲಿ ಕಳೆದರು. ಗಾಂಧೀಜಿ ನಿಧನರಾದ ಸಂದರ್ಭದಲ್ಲಿ ರಾಷ್ಟ್ರಪಿತ ಎಂದು ಕರೆಸಿಕೊಂಡಿದ್ದ ಅವರ ಹೆಸರಿನಲ್ಲಿ ಭಾರತದಲ್ಲಿ ಒಂದು ಸ್ವಂತ ಮನೆಯಷ್ಟೇ ಅಲ್ಲ, ಒಂದು ನಿವೇಶನವೂ ಸಹ ಇರಲಿಲ್ಲ.

ಮೋಹನದಾಸ ಕರಮಚಂದ ಗಾಂಧಿಯಾಗಿದ್ದ ಸಾಮಾನ್ಯ ಜೀವವೊಂದು ಮಹಾತ್ಮ ಗಾಂಧಿಯಾದ ಕಥನವು ಅಕ್ಷರಕ್ಕೆ ಅಥವಾ ಮಾತಿಗೆ ನಿಲುಕುವ ಸಂಗತಿಯಲ್ಲ. ಅಹಿಂಸೆಯ ಪರಿಕಲ್ಪನೆಯನ್ನು ಇಡೀ ಜಗತ್ತಿಗೆ ಪಸರಿಸಿದ ಗಾಂಧೀಜಿ ಜಗತ್ತಿನ ನೂರೈವತ್ತಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ದಂತಕಥೆಯಂತೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾರೆ. ಪಕ್ಕಾ ಕಮ್ಯೂನಿಸ್ಟ್ ರಾಷ್ಟ್ರವಾದ ಚೀನಾದಲ್ಲಿ ಒಂದನೆಯ ತರಗತಿಯಿಂದ ಹನ್ನೆರೆಡನೆಯ ತರಗತಿಯವರೆಗೆ ಗಾಂಧಿ ಅವರ ಬದುಕು ಮತ್ತು ವಿವಿಧ ಹೋರಾಟ ಹಾಗೂ ಚಿಂತನಾ ಲಹರಿಗಳು ಪಠ್ಯವಾಗಿದ್ದರೆ, ಗಾಂಧಿ ಜನಿಸಿದ ನೆಲದಲ್ಲಿ ಪಠ್ಯ ಪುಸ್ತಕಗಳಿಂದ ಅಳಿಸಿ ಹಾಕುವ ಕ್ರಿಯೆಗಳು ನಿರಂತರವಾಗಿ ಚಾಲ್ತಿಯಲ್ಲಿವೆ.

ಗಾಂಧೀಜಿ ಗತಿಸಿದ ಮೊದಲ ಆರು ದಶಕಗಳ ಕಾಲ ಬಲಪಂಥೀಯರ ಪಾಲಿಗೆ ಅಗಿಯುವ ಹಲ್ಲಿಗೆ ಉಪ್ಪುಕಡಲೆಯಾಗಿದ್ದ ಮಹಾತ್ಮ ಈಗ ಕಳೆದ ಒಂದೂವರೆ ದಶಕದಿಂದ ದಲಿತ ಸಮುದಾಯದ ಕೆಲವು ಅಸ್ವಸ್ಥ ಮನಸ್ಸುಗಳಿಗೆ ಅಗಿಯಲಾರದ ಮತ್ತು ನುಂಗಲಾರದ ತುತ್ತಾಗಿದ್ದಾರೆ. ಭಾರತದ ಇಂತಹ ಅನಿಷ್ಠ ಕ್ರಿಯೆಗಳಾಚೆಗೂ ಗಾಂಧೀಜಿ ಭವಿಷ್ಯದ ಜಗತ್ತಿನ ಮಾದರಿ ಹೇಗಿರಬೇಕು ಎಂಬ ಚಿಂತನೆಗೆ ಸ್ಪೂರ್ತಿಯಾಗಿದ್ದಾರೆ.

ಇತ್ತೀಚೆಗೆ ಶಿರಸಿಯಲ್ಲಿ ನನ್ನ ನಾಲ್ಕು ದಶಕಗಳ ಆತ್ಮೀಯ ಮಿತ್ರ ಹಾಗೂ ಎಂಬತ್ತರ ದಶಕದಲ್ಲಿ ಕರ್ನಾಟಕಕ್ಕೆ ಅಪ್ಪಿಕೋ ಚಳುವಳಿಯನ್ನು ಪರಿಚಯಿಸಿದ ಖ್ಯಾತ ಪರಿಸರವಾದಿ ಪಾಂಡುರಂಗ ಹೆಗ್ಡೆಯವರ ಜೊತೆ ಇಡೀ ರಾತ್ರಿ ಮಾತನಾಡುತ್ತಾ ಕುಳಿತಿದ್ದೆ. ಸುಂದರ್‌ಲಾಲ್ ಬಹುಗಣರ ಶಿಷ್ಯರಾದ ಅವರು ದೆಹಲಿಯಲ್ಲಿ ತಮ್ಮ ವೃತ್ತಿಯನ್ನು ತೊರೆದು ಪರಿಸರ ಚಳುವಳಿಗೆ ತಮ್ಮನ್ನು ತೆತ್ತುಕೊಂಡವರು. ಇಂದಿಗೂ ಕೂಡ ವರ್ಷದಲ್ಲಿ ಕನಿಷ್ಠ ಮೂರು ತಿಂಗಳು ಕಾಲ ದಕ್ಷಿಣ ಅಮೇರಿಕಾದ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ ಸೇರಿದಂತೆ ಅಲ್ಲಿನ ಹಿಂದುಳಿದ ರಾಷ್ಟ್ರಗಳಲ್ಲಿ ಪ್ರವಾಸ ಮತ್ತು ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.

ಕಳೆದ ವರ್ಷ ಅವರು ನಾಲ್ಕು ತಿಂಗಳ ಕಾಲ ಅವಿಭಜಿತ ಸೋವಿಯತ್ ರಷ್ಯಾದ ನಾಲ್ಕು ರಾಷ್ಟಗಳಲ್ಲಿ ತಿರುಗಾಡಿ ಬಂದವರು. ರಷ್ಯಾದ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡರು. ಪಾಂಡುರಂಗ ಹೆಗ್ಡೆ ಅವರ ವಿಶೇಷವೆಂದರೆ, ಯಾವುದೇ ನಿರ್ದಿಷ್ಟ ಕಾರ್ಯಕ್ರಮಗಳ ಯೋಜನೆಗಳನ್ನು ಹಮ್ಮಿಕೊಳ್ಳದೆ, ಪ್ರದೇಶದಿಂದ ಪ್ರದೇಶಕ್ಕೆ ಮತ್ತು ಹಳ್ಳಿಯಿಂದ ಹಳ್ಳಿಗೆ ತಿರುಗುವುದು ಅವರ ಗುಣ.

ಭಾಷೆಯ ಸಂವಹನಕ್ಕೆ ಇಂಗ್ಲೀಷ್ ಹೊರತು ಪಡಿಸಿದರೆ, ಕೇವಲ ಹಾವಭಾವ ಮತ್ತು ಸನ್ನೆಗಳ ಮೂಲಕ ರೈತರ ಮನೆಗಳಲ್ಲಿ ಉಳಿದುಕೊಂಡ ಕಥೆಗಳನ್ನು ಮತ್ತು ತಮ್ಮನ್ನು ಅಲ್ಲಿನ ಟ್ರಕ್ ಅಥವಾ ಕಾರಿನ ಚಾಲಕರು ‘’ಗಾಂಧಿ ನೆಲದಿಂದ ಬಂದಿರುವ ವ್ಯಕ್ತಿ’’ ಎಂಬ ಏಕೈಕ ಕಾರಣಕ್ಕಾಗಿ ಪ್ರೀತಿ, ವಿಶ್ವಾಸ ತೋರಿಸಿದ ಬಗೆಯನ್ನು ಸ್ಮರಿಸಿಕೊಂಡು ನನ್ನೆದುರು ಭಾವುಕರಾದರು. “ಜಗದೀಶ್, ಗಾಂಧೀಜಿಯವರು ಈ ಮಟ್ಟದಲ್ಲಿ ಜಗತ್ತಿನ ಮೂಲೆ ಮೂಲೆಗೂ, ಪ್ರತಿಯೊಬ್ಬ ನಾಗರೀಕನ ಎದೆಗೂ ತಲುಪಿದ್ದಾರೆ ಎಂದು ತಿಳಿದು ನಾನು ಆಶ್ಚರ್ಯಚಕಿತನಾದೆ’’ ಎಂದು ನುಡಿದರು.

ತಾನು ಜನಿಸಿದ ನಾಡಿಗಿಂತ ಮಿಗಿಲಾಗಿ ಯಾವ ಸಂಸ್ಕತಿಯನ್ನು ಅವರು ತಮ್ಮ ಬದುಕಿನುದ್ದಕ್ಕೂ ಸೈದ್ಧಾಂತಿಕವಾಗಿ ವಿರೋಧಿಸಿಕೊಂಡು ಬಂದರೋ, ಅದೇ ಪಾಶ್ಚಿಮಾತ್ಯ ಜಗತ್ತು ಗಾಂಧೀಜಿಯವರನ್ನು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಅರ್ಥವಾಗುವಂತೆ ವ್ಯಾಖ್ಯಾನಿಸಿದೆ. ಆಲ್ಬರ್ಟ್ ಐನ್ಸ್ಟೀನ್, ಟಾಲ್ ಸ್ಟಾಯ್, ರೋನಾಲ್ಡ್ ಡಂಕನ್, ಲೂಯಿ ಫಿಶರ್, ರಿಚರ್ಡ್ ಆಟನ್ ಬರೋ, ಥಾಮಸ್ ವೆಬರ್, ಲಾರ್ಡ್ ಮೌಂಟ್ ಬ್ಯಾಟನ್, ವೆಬ್ ಮಿಲ್ಲರ್ ಹೀಗೆ ನೂರಾರು ಮಹನೀಯರನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದು.

ಆದರೆ, ಭಾರತದಲ್ಲಿ ಮಾತ್ರ ಗಾಂಧೀಜಿಯವರ ಮನುಕುಲದ ಉದಾತ್ತ ಚಿಂತನೆಗಳನ್ನು ಬದಿಗಿರಿಸಿ, ಅವರೊಬ್ಬ ಹಠವಾದಿ, ಸನಾತನ ಹಿಂದೂವಾದಿ ಎಂಬ ಟೀಕೆಗಳು ಸದಾ ಮೂಚೂಣಿಯಲ್ಲವೆ. ಇಂತಹ ಆಧಾರರಹಿತವಾದ ಟೀಕೆ ಮಾಡುವಾಗ ನಾವು ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆಯ ಕೃತಿಗೆ ‘’ಸತ್ಯದೊಂದಿಗೆ ನನ್ನ ಪ್ರಯೋಗ” ಎಂಬ ಹೆಸರನ್ನು ಏಕೆ ಇಟ್ಟಿದ್ದರು ಎಂಬುದನ್ನು ಮರೆಯುತ್ತೇವೆ.

ಅಷ್ಟು ಮಾತ್ರವಲ್ಲದೆ ಭಾರತದಲ್ಲಿ ಗಾಂಧಿಯಷ್ಟು ಚರ್ಚೆಗೊಳಗಾದ ಮತ್ತು ಟೀಕೆಗೊಳಗಾದ ವ್ಯಕ್ತಿ ಭಾರತದಲ್ಲಿ ಮತ್ತೊಬ್ಬರಿಲ್ಲ. ಗಾಂಧೀಜಿಯವರನ್ನು ದೇವದೂತನ ಸ್ಥಾನಕ್ಕೇರಿಸಿದಾಗ ಇಂತಹ ಅಪವಾಖ್ಯಾನಗಳು ಸಹಜ. ಏಕೆಂದರೆ, ಗಾಂಧೀಜಿಯವರು ನಮ್ಮ ಹಾಗೆ ಎಲ್ಲಾ ಬಗೆಯ ರಾಗ ದ್ವೇಷಗಳನ್ನು ಮತ್ತು ರಕ್ತ, ಮಾಂಸ, ಮೂಳೆ ಹೊಂದಿದ್ದ ಮನುಷ್ಯರಾಗಿದ್ದರು ಎಂದು ಭಾವಿಸಿದಾಗ ಮಾತ್ರ ಅವರ ವ್ಯಕ್ತಿತ್ವ ಮತ್ತು ಅವರಲ್ಲಿದ್ದ ಆದರ್ಶ ಗುಣಗಳು ನಮಗೆ ಮನನವಾಗಬಲ್ಲವು. ಆರಾಧನಾ ನೆಲೆಯಿಂದ ಅಥವಾ ದ್ವೇಷದ ನೆಲೆಯಿಂದ ನೋಡಿದಾಗ ಗಾಂಧೀಜಿ ಮಾತ್ರವಲ್ಲ, ಜಗತ್ತಿನ ಯಾವೊಬ್ಬ ನಾಯಕನ ನಿಜವಾದ ಚಿತ್ರಣ ನಮಗೆ ದಕ್ಕಲಾಗದು.

ಅವರ ಪ್ರತಿಯೊಂದು ನಿರ್ಧಾರ ಮತ್ತು ಹೆಜ್ಜೆಗಳು ಪ್ರಯೋಗಗಳಿಂದ ಕೂಡಿದ್ದವು. ಅನೇಕ ಬಾರಿ ತಪ್ಪು ಹೆಜ್ಜೆ ಇಟ್ಟಾಗ ಎಚ್ಚೆತ್ತುಕೊಂಡು ತಪ್ಪುಗಳನ್ನು ತಿದ್ದಿಕೊಂಡಿದ್ದಾರೆ. ಅವರ ಬದುಕಿನ ಹೆಜ್ಜೆಯ ಗುರುತುಗಳನ್ನು ಗಮನಿಸುವಾಗ ಅನೇಕ ತೀವ್ರತರ ಬದಲಾವಣೆಗಳನ್ನು ನಾವು ಗಮನಿಸಬಹುದು. ಹಿಂದೂ ಧರ್ಮ ಕುರಿತಂತೆ, ಅಸ್ಪಶ್ಯತೆ ಕುರಿತಂತೆ, ದೇವರ ಕುರಿತಾದ ತಮ್ಮ ನಂಬಿಕೆ ಕುರಿತಂತೆ ಅವರ ಧೋರಣೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಹಾಗಾಗಿ ಗಾಂಧಿ ಎಂದರೆ, ಸ್ವಾತಂತ್ರ್ಯಲ ಹೋರಾಟಗಾರ, ಗಾಂಧಿ ಎಂದರೆ ಬ್ಯಾರಿಸ್ಟರ್, ಗಾಂಧಿ ಎಂದರೆ ಸನಾತನ ಹಿಂದೂವಾದಿ, ಗಾಂಧಿ ಎಂದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಕಡು ವಿರೋಧಿ, ಗಾಂಧಿ ಎಂದರೆ ಅಹಿಂಸೆಯ ಪ್ರತಿಪಾದಕ, ಗಾಂಧಿ ಎಂದರೆ ದಲಿತ ವಿರೋಧಿ ಹೀಗೆ ನೀವು ಅವರನ್ನು ಕುರಿತು ಏನೇ ವಿಶೇಷಣಗಳಿಂದ ಕರೆದರೂ ಅದು ಅವರಿಗೆ ಸಲ್ಲುತ್ತದೆ.

ಏಕೆಂದರೆ, ಅವರ ವ್ಯಕ್ತಿತ್ವದಲ್ಲಿ ಸ್ವಹಿತಕ್ಕಿಂತ ಮುಖ್ಯವಾಗಿ ತಾನು ಬದುಕುತ್ತಿರುವ ಸಮಾಜದ ಹಿತ ಮುಖ್ಯವಾಗಿತ್ತು. ಹಾಗಾಗಿ ಅವರ ಕುರಿತು ಪರ ವಿರೋಧ ಚರ್ಚೆಗಳು ಯಾವಾಗಲೂ ಚಾಲ್ತಿಯಲ್ಲಿವೆ. ಅದು ಸಹಜ. ಒಂದು ಸಮಾಜವನ್ನು ಹಾಗೂ ಜಗತ್ತನ್ನು ತನ್ನ ವ್ಯಕ್ತಿತ್ವದ ಮೂಲಕ ಪ್ರಭಾವಿಸಿದ ವ್ಯಕ್ತಿಗಳ ಕುರಿತಂತೆ ಆಯಾ ಕಾಲದಘಟ್ಟದಲ್ಲಿ ಇಂತಹ ಚರ್ಚೆಗಳು ನಡೆಯುತ್ತಿರಬೇಕು. ಅದು ಅಗತ್ಯ ಕೂಡ ಹೌದು. ಆದರೆ, ಆರಾಧನೆಯ ಮತ್ತು ಟೀಕೆಗಳ ನೋಟದಲ್ಲಿ ಚಿಕಿತ್ಸಕ ಬುದ್ಧಿ ಹೆಪ್ಪುಗಟ್ಟಿರುತ್ತದೆ. ಚಿಕಿತ್ಸಕ ಅಥವಾ ವಿಮರ್ಶೆಯ ನೋಟದಲ್ಲಿ ಮಾತ್ರ ಒರೆಗಲ್ಲಿಗೆ ಹಚ್ಚಿದ ಚಿನ್ನದ ಹಾಗೆ ಐತಿಹಾಸಿಕ ವ್ಯಕ್ತಿಗಳ ಗುಣ ಅನಾವರಣಗೊಳ್ಳುತ್ತದೆ. ತಮ್ಮ ವಿದೇಶಿ ಮಿತ್ರರೊಬ್ಬರ ಟೀಕೆಗೆ ಗಾಂಧೀಜಿಯವರು ನೀಡಿದ ಉತ್ತರ ಅವರನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಕಾರಿಯಾಗಿದೆ.

ಗಾಂಧೀಜಿಯವರು ನೀಡಿದ ಪ್ರತಿಕ್ರಿಯೆ ಹೀಗಿತ್ತು “ನಾನು ಸಾಮಾನ್ಯವಾಗಿ ಯಾವುದೇ ಟೀಕೆಗಳಿಗೆ ಉತ್ತರಿಸುವುದಿಲ್ಲ. ಏಕೆಂದರೆ ಅಂತಹವುಗಳು ನಮ್ಮ ಜೀವನ ಮತ್ತು ಸಿದ್ಧಾಂತಗಳ ಕುರಿತಂತೆ ಮತ್ತಷ್ಟು ಟೀಕೆ ಮಾಡಲು ಉದ್ದೀಪಿಸಬಲ್ಲವು. ಆದರೆ, ನಾನು ಬಲ್ಲ ನನ್ನ ಆತ್ಮೀಯ ಮಿತ್ರರೊಬ್ಬರು ನಾನು ಸಂತನಾಗಲು ಹೊರಟಿದ್ದೇನೆಂದು ಆರೋಪಿಸಿದ್ದಾರೆ. ಹಾಗಾಗಿ ಮಿತ್ರರ ಟೀಕೆಗೆ ಉತ್ತರಿಸಬೇಕಾಯಿತು. ಏಕೆಂದರೆ ಅವರ ವ್ಯಕ್ತಿ ಸೌಂದರ್ಯಕಕ್ಕೆ ನಾನು ಮಾರು ಹೋಗಿದ್ದೀನಿ. ನನ್ನ ಪ್ರಕಾರ ಪ್ರಸ್ತುತ ರಾಜಕಾರಣದಲ್ಲಿ ಸಂತ ಎಂಬ ಪದವನ್ನು ಹೊರಗಿಡಬೇಕು. ಅಂತಹ ಪವಿತ್ರ ಶಬ್ದವನ್ನು ಇಂದಿನ ಕಲುಷಿತ ರಾಜಕಾಣಕ್ಕೆ ಬಳಸಬಾರದು. ನನ್ನ ಕುರಿತಾಗಿ ಅತ್ಯಂತ ವಿನಯದಿಂದ ಹೇಳಬಹುದಾದರೆ ನಾನು ಸತ್ಯಾನ್ವೇಷಣೆಯ ಹಾದಿಯಲ್ಲಿರುವ ಓರ್ವ ಪಥಿಕ. ನನ್ನ ಮಿತಿಗಳನ್ನು ನಾನು ಬಲ್ಲವನಾಗಿದ್ದು ಆಗಾಗ್ಗೆ ತಪ್ಪುಗಳನ್ನು ಮಾಡುತ್ತಾ, ಅವುಗಳನ್ನು ತಿದ್ದಿಕೊಳ್ಳುತ್ತಾ, ಮಾಡಿದ ತಪ್ಪುಗಳನ್ನು ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಳ್ಳುವ ಜಾಯಮಾನದವನಾಗಿದ್ದೀನಿ. ನನ್ನ ಬದುಕು ವಿಜ್ಞಾನಿಯೊಬ್ಬನ ಪ್ರಯೋಗಶಾಲೆ ಇದ್ದಂತೆ. ನಿರಂತರ ಅನ್ವೇಷಣೆಯ ಮೂಲಕ ಮಾತ್ರ ಸತ್ಯದ ದರ್ಶನವಾಗುತ್ತದೆ ಎಂದು ನಂಬಿದವನು ನಾನು” ಗಾಂಧೀಜಿಯವರ ಈ ಮಾತುಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಗಾಂಧೀಜಿಯವರ ಚಾರಿತ್ರ್ಯ ಮತ್ತು ಆತ್ಮಸಾಕ್ಷಿಗೆ ಮತ್ತು ಪ್ರಾಮಾಣಿಕತೆಗೆ ಈ ಘಟನೆ ಇಂದಿಗೂ ಉದಾಹರಣೆಯಾಗಿದೆ. 1917ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅವರು ಬಿಹಾರದ ಚಂಪಾರಣ್ಯ ಸತ್ಯಾಗ್ರಹದಲ್ಲಿ ಹೋರಾಡುತ್ತಿದ್ದಾಗ, ಅಹಮದಾಬಾದಿನ ಸಬರಮತಿ ಆಶ್ರಮದ ಸಾರ್ವಜನಿಕ ನಿಧಿ ಹುಂಡಿಯಿಂದ ನಾಲ್ಕು ರೂಪಾಯಿಗಳನ್ನು ಎತ್ತಿಕೊಂಡ ಅವರ ಎರಡನೆಯ ಪುತ್ರ ಮಣಿಲಾಲ್ ಹಣವನ್ನು ಕಲ್ಕತ್ತ ನಗರದಲ್ಲಿ ನಿರುದ್ಯೋಗಿಯಾಗಿದ್ದ ಹಿರಿಯ ಸಹೋದರ ಹರಿಲಾಲ್ ಗೆ ಕಳಿಸಿಕೊಟ್ಟಿದ್ದರು.

ಈ ವಿಷಯ ಗಾಂಧೀಜಿಗೆ ತಿಳಿದಾಗ ಸಾರ್ವಜನಿಕ ಹಣ ತನ್ನ ಕುಟುಂಬದಿಂದ ದುರುಪಯೋಗವಾದುದಕ್ಕೆ ಮೂರು ದಿನ ಉಪವಾಸದ ಶಿಕ್ಷೆಯನ್ನು ಸ್ವತಃ ಅನುಭವಿಸಿದರು. ಅಷ್ಟು ಮಾತ್ರವಲ್ಲದೆ, ಹಣ ವಸೂಲಿಗಾಗಿ ತಮ್ಮ ಪುತ್ರ ಮಣಿಲಾಲ್ ಅವರನ್ನು ದಿನಕ್ಕೆ ನಾಲ್ಕಾಣೆ ವೇತನದ ಆಧಾರದ ಮೇಲೆ ತಮಿಳುನಾಡಿನ ತಿರಪ್ಪೂರು ಖಾದಿ ಘಟಕಕ್ಕೆ ಏಳು ತಿಂಗಳು ಕಾಲ ನೌಕರಿಗೆ ಸೇರಿಸಿ, ನಾಲ್ಕು ರೂಪಾಯಿಗಳನ್ನು ಮರಳಿ ಸಾರ್ವಜನಿಕ ನಿಧಿಗೆ ಸೇರಿಸಿದ್ದರು.

  • ಜಗದೀಶ್ ಕೊಪ್ಪ, ಮೈಸೂರು, ಹಿರಿಯ ಪತ್ರಕರ್ತರು

Leave a Reply