ಬೆಂಗಳೂರು: ಇದುವರೆಗೆ ಬಿಜೆಪಿ ನಾಯಕರ ವಿರುದ್ಧ ಸರಣಿ ವಾಗ್ದಾಳಿಗಳ ಮೂಲಕ ಬಂಡಾಯ ನಾಯಕನಾಗಿ ಗುರುತಿಸಿಕೊಂಡಿದ್ದ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಶುರುಮಾಡಿದ್ದಾರೆ. ಅದರಲ್ಲೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಊಸರವಳ್ಳಿ ಎಂದು ಟೀಕಿಸಿ ಪ್ರಹಾರ ನಡೆಸಿದ್ದಾರೆ.
ತಾವು ವ್ಯಕ್ತಿ ಪೂಜೆ ಮಾಡುವುದಿಲ್ಲ, ದೇವರಲ್ಲಿ ನಂಬಿಕೆಯಿಲ್ಲ, ಹಿಂದೂ ಪೂಜೆಗಳಲ್ಲಿ ಆಚರಣೆಗಳಲ್ಲಿ ನಂಬಿಕೆ ಇಲ್ಲ ಎಂದು ಹೇಳುತ್ತಿದ್ದ ಸತೀಶ್ ಜಾರಕಿಹೊಳಿ ಇದೀಗ ಸಿದ್ದರಾಮಯ್ಯ ಅವರ ವ್ಯಕ್ತಿ ಪೂಜೆ ಆರಂಭಿಸಿದ್ದಾರೆ ಎಂದು ದೂರಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಸಿದ್ದರಾಮಯ್ಯನವರನ್ನು ತಮ್ಮ ‘ಮನೆ ದೇವ’ರಾಗಿ ಮಾಡಿಕೊಂಡಿರುವ ನೀವು ಎಂತಹ ಅವಕಾಶವಾದಿಗಳು ಎಂದು ಜನತೆಗೆ ಗೊತ್ತಾಗುತ್ತಿದೆ. ಸಂದರ್ಭಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ಬಣ್ಣ ಬದಲಿಸುವ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ಮರೀಚಿಕೆ ಆಗಿರುವುದು ಎಂದು ವಾಗ್ದಾಳಿ ನಡೆಸಿದ್ದಾರೆ.
ಹುಕ್ಕೇರಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನೆರವೇರಿಸಿ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ಎಲ್ಲ ಕಾರ್ಯಕರ್ತರಂತೆ ನಾನೂ ಸಹ ಸಿಎಂ ಸಿದ್ದರಾಮಯ್ಯ ಅವರನ್ನು ದೇವರಂತೆ ನೋಡುತ್ತೇನೆ. ಕಾರ್ಯಕರ್ತರು ಅವರವರ ನಾಯಕರನ್ನು ಭಕ್ತಿಯಿಂದ ದೇವರಂತೆ ಕಾಣುತ್ತಾರೆ. ಅದರಲ್ಲಿ ತಪ್ಪೇನಿಲ್ಲ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸತೀಶ್ ಜಾರಕಿಹೊಳಿಯವರ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ.




